ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದ ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ. ಆದ್ರೆ ರಕ್ಷಣೆಗೂ ಮುನ್ನ ಮೀನುಗಾರ ಥರ್ಮಾಕೋಲ್ ಸಹಾಯದಿಂದ ಸಮುದ್ರದಲ್ಲಿ ಅರ್ಧ ತಾಸು ಈಜಾಡಿ ಪ್ರಾಣ ಉಳಿಸಿಕೊಂಡಿದ್ದರು.
ಮಂಗಳೂರಿನ ಉಳ್ಳಾಲದ ಅಳಿವೆಬಾಗಿಲಿನಲ್ಲಿ ಈ ಘಟನೆ ನಡೆದಿದೆ. ಕಸಬ ಬೆಂಗ್ರೆಯ ನಿವಾಸಿ ನವಾಝ್(35) ರಕ್ಷಿಸಲ್ಪಟ್ಟವರು. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆಬಾಗಿಲಿನತ್ತ ಹಿಂದಿರುಗುತ್ತಿದ್ದಾಗ ಸಮುದ್ರದ ನಡುವೆ ಕೆಟ್ಟು ನಿಂತಿದ್ದು, ಈ ವೇಳೆ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದಾಗ ಭಾರೀ ಗಾತ್ರದ ಅಲೆ ಅಪ್ಪಳಿಸಿ ಸಮುದ್ರಕ್ಕೆ ಬಿದ್ದಿದ್ದರು.
ಬಳಿಕ ಅರ್ಧ ಗಂಟೆಗಳಷ್ಟು ಕಾಲ ಥರ್ಮಾಕೋಲಿನ ಸಹಾಯದಿಂದ ಸಮುದ್ರದಲ್ಲಿ ಈಜಾಡಿದ್ದಾರೆ. ಇದೇ ವೇಳೆ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಉಳ್ಳಾಲದ ನಿಶಾನ್ ಜಾಯ್ ಮಾಲೀಕತ್ವದ ಓಶಿಯನ್ ಬ್ರೀಝ್ ನಾಡದೋಣಿಯಲ್ಲಿದ್ದ ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ , ರಿತೀಶ್ ಹೊಯ್ಗೆ ಬಜಾರ್ ಅವರು ನವಾಝನನ್ನ ನೋಡಿ ರಕ್ಷಿಸಿದ್ದಾರೆ.