ಮಂಗಳೂರು: ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಗೆ ಸಂಬಂಧಪಟ್ಟಂತೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದೆ ನಡೆದುಕೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದಿರುವುದಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಮಂಗಳೂರಲ್ಲಿ ವಿಧಾನಪರಿಷತ್ ಸದಸ್ಯ ಬಿ. ಎಂ. ಫಾರೂಕ್ ಅವರ ಶಾಸಕರ ವೇತನದಿಂದ ಬಡ ರೋಗಿಗಳಿಗೆ ಸಹಾಯ ಧನ ವಿತರಿಸಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೈತ್ರಿ ಸರ್ಕಾರ ರಚನೆಯಾದಾಗ ಮೂರನೇ ಒಂದು ಪಾಲು ನಮಗೆ, ಮೂರನೇ ಎರಡು ಪಾಲು ಕಾಂಗ್ರೆಸ್ಗೆ ಎಂದು ತಿಳಿಸಲಾಗಿತ್ತು. ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಪ್ರಕ್ರಿಯೆ ನಡೆಯಲಿದೆ. ನಾವು 12 ಸ್ಥಾನಗಳನ್ನು ಕೇಳಿದ್ದೇವೆ. ಆದರೆ ಅಷ್ಟು ಕೊಡಲೇಬೇಕೆಂದು ಕೇಳಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿಯ ಪ್ರಗತಿಯನ್ನು ತಡೆಯಲು ಮೈತ್ರಿ ಸರ್ಕಾರ ರಚನೆಯಾಗಿದೆ. ಮೈತ್ರಿ ಕೂಟ ನಡೆಸಿದಂತೆ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇದೇ ಉದ್ದೇಶದಿಂದ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲು ನಿರ್ಧರಿಸಲಾಗಿದೆ. ನಾಳೆ ನಡೆಯುವ ಸಮನ್ವಯ ಸಮಿತಿ ಸಭೆಯ ಅಭಿಪ್ರಾಯ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಅದನ್ನು ತೀರ್ಮಾನಿಸಲಾಗುವುದು ಎಂದು ದೇವೇಗೌಡ ಹೇಳಿದರು.
ಇನ್ನು ಮಂಡ್ಯದಲ್ಲಿ ಸ್ಪರ್ಧಿಸಲು ಸುಮಲತಾ ಅಂಬರೀಶ್ ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತಿರುವ ಬಗ್ಗೆ ಉತ್ತರಿಸಿದ ದೇವೇಗೌಡ್ರು, ಸುಮಲತಾ ಟಿಕೆಟ್ ಕೇಳುವುದು ಸ್ವಾಭಾವಿಕ. ಆದರೆ ಮಂಡ್ಯ ಮೊದಲಿನಿಂದಲು ಜೆಡಿಎಸ್ನ ಕ್ಷೇತ್ರ. ನಮಗೆ ಆ ಕ್ಷೇತ್ರ ತಪ್ಪುವ ಆತಂಕ ಇಲ್ಲ. ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿಖಿಲ್ ಆಕಾಂಕ್ಷಿ, ಅಲ್ಲಿಯ ಜನ ನಿಖಿಲ್ ಸ್ಪರ್ಧಿಸಬೇಕು ಎಂದು ಬಯಸುತ್ತಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ಗೆ ಬಿಟ್ಟು ಕೊಡುವ ಬಗ್ಗೆ ಅಂತಿಮವಾಗಿಲ್ಲ. ಆದರೆ ಆ ಕ್ಷೇತ್ರದ ಸಂಸದರಾಗಿರುವ ವೀರಪ್ಪ ಮೊಯ್ಲಿ ಮೊದಲೇ ಜೆಡಿಎಸ್ಗೆ ಸ್ಥಾನ ನೀಡಬೇಕೆಂದು ಹೇಳಿದ್ದಾರೆ ಎಂದರು.
ನರೇಂದ್ರ ಮೋದಿ ಮಾ. 6 ರಂದು ಕರ್ನಾಟಕಕ್ಕೆ ಬಂದಾಗ ನಾಲ್ವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ವಿಚಾರ ಗಮನಿಸಿದ್ದೇನೆ. ಆದರೆ ನಂತರ ಆಗುವ ರಾಜಕೀಯ ಏರುಪೇರುಗಳ ಬಗ್ಗೆ ಚರ್ಚೆ ಮಾಡಲಾಗುವುದು. ಮೋದಿ ಅವರು ಎಲ್ಲಿಗೆ ಹೋಗಿ ಭಾಷಣ ಮಾಡಿದರೂ ಅವರು ದೇಶದ ಪ್ರಗತಿಗೆ ಸ್ಟ್ರಾಂಗೆಸ್ಟ್ ಗೌರ್ಮೆಂಟ್ ಬೇಕು ಎಂದು ಹೇಳುತ್ತಾರೆ. ಅವರು ಅವರಿಂದ ಮಾತ್ರ ಸ್ಟ್ರಾಂಗೆಸ್ಟ್ ಸರ್ಕಾರ ನೀಡಲಿಕ್ಕೆ ಸಾಧ್ಯ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಹೆಚ್ಡಿಡಿ ಗೇಲಿ ಮಾಡಿದರು.
ಇವರ ಸ್ಟ್ರಾಂಗೆಸ್ಟ್ ಸರ್ಕಾರ ಇದ್ದಾಗಲೇ ಅವರು ಬಂದಿದ್ದಾರೆ. ವಾಜಪೇಯಿ ಸರ್ಕಾರ ಅವಧಿಯಲ್ಲಿ ಕಾರ್ಗಿಲ್ ಯುದ್ಧವಾಯಿತು. ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದರೆ, 130 ಕೋಟಿ ಜನರು ಒಂದು ಶಕ್ತಿಯಾಗಿ ನಿಲ್ಲುತ್ತಾರೆ. ಇದನ್ನು ಮೋದಿಯವರಿಂದ ಕಲಿಯಬೇಕಿಲ್ಲ. ಈ ವರೆಗೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ ಮೋದಿ ಮಾತೆತ್ತಿದರೆ, ತಾನು ತನ್ನ ಸರ್ಕಾರ ಎನ್ನುತ್ತಾರೆ. ನಾನು ಬಹಳ ವಿಷಯ ಹೇಳಲಿಕ್ಕಿದೆ. ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಭ್ರಷ್ಟಾಚಾರ ಆದರೂ ಮೋದಿ ಮೌನವಾಗಿದ್ದಾರೆ. ನಾನು ನಾಲ್ಕು ಬಾರಿ ಮೋದಿ ಅವರನ್ನು ಬೇರೆ ಬೇರೆ ಕಾರಣಕ್ಕೆ ಭೇಟಿಯಾದ ಸಂದರ್ಭದಲ್ಲಿ ಇದನ್ನು ಕೇಳಿದರೆ ಅವರು ಮೌನವಾಗಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದರು.