ಸುಳ್ಯ: ವಿಧಾನಸಭಾ ಕ್ಷೇತ್ರದ ನಗರ ಪಂಚಾಯತ್ ನಿಧಿಯಿಂದ ಅಕ್ಕಿ ಹೊರತು ಪಡಿಸಿ ಫುಡ್ಕಿಟ್ ನೀಡಲು ಅವಕಾಶವಿಲ್ಲ. ಯಾರಾದರೂ ಹಸಿವಿನಿಂದ ಬಳಲುತ್ತಿದ್ದರೆ ಅವರಿಗೆ ಊಟ ಕೊಡುವ ವ್ಯವಸ್ಥೆ ಗಂಜಿ ಕೇಂದ್ರದ ಮೂಲಕ ಮಾಡೋಣ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಖಡಕ್ ಸೂಚನೆ ನೀಡಿದ್ದಾರೆ.
ಸುಳ್ಯ ನಗರ ಪಂಚಾಯತ್ ನಲ್ಲಿ ಎ.ಸಿ.ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರು ದಿನಸಿ ಸಾಮಗ್ರಿ ನೀಡಲು ಕಳೆದ ಸಭೆಯಲ್ಲಿ ಚರ್ಚಿಸಿದ ಬಗ್ಗೆ ಎಸಿಯವರ ಗಮನಕ್ಕೆ ತಂದರು. ಇದೇ ವೇಳೆ, ಮುಖ್ಯಾಧಿಕಾರಿ ಮಾತನಾಡಿ, ದಾನಿಗಳ ಹುಡುಕಾಟದಲ್ಲಿದ್ದೇವೆ. ಆದರೆ, ಪಂಚಾಯತ್ ನಿಧಿಯಿಂದ ಕೊಡಲು ಬರುವುದಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತ್ಯುತ್ತರವಾಗಿ ಸದಸ್ಯರು ಸ್ವಂತ ನಿಧಿಯಿಂದ ಕೊಡಲು ಅವಕಾಶ ಇದೆ. ಆ ಬಗ್ಗೆ ಸುತ್ತೋಲೆಯೂ ಇದೆ ಎಂದು ಹೇಳಿದರು. ಕೂಡಲೇ ಸುತ್ತೋಲೆಯನ್ನು ತರಿಸಿಕೊಂಡ ಎ.ಸಿ. ಅವರು ಅಕ್ಕಿ ಮಾತ್ರ ಕೊಡಲು ಅವಕಾಶ ಇದೆ. ಉಳಿದ ದಿನಸಿಗೆ ಅವಕಾಶ ಇಲ್ಲ ಎಂದು ಹೇಳಿದರು. ತುಂಬಾ ಬಡವರಿದ್ದರೆ ಅಂತವರನ್ನು ಗುರುತಿಸಿ ಗಂಜಿ ಕೇಂದ್ರದ ಮೂಲಕ ಊಟದ ವ್ಯವಸ್ಥೆ ಕಲ್ಪಿಸೋಣ ಎಂದು ಹೇಳಿದರು.