ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕೊರೊನಾ ಶೂನ್ಯ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ 2020 ಏಪ್ರಿಲ್ ನಲ್ಲಿ ಪತ್ತೆಯಾದ ಬಳಿಕ ನಿನ್ನೆಯಷ್ಟೇ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಾಗಿತ್ತು. ಇಂದು ಎರಡನೇ ದಿನವೂ ಶೂನ್ಯ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಬಳಿಕ ಈವರೆಗೂ ಪ್ರತಿದಿನವೂ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದವು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳು ರಾಜ್ಯದಲ್ಲಿ ಎರಡನೇ ಅಥವಾ ಮೂರನೇ ಸ್ಥಾನದಲ್ಲಿ ಇರುತ್ತಿದ್ದವು. ಕೆಲವು ದಿನಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದವು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು, ನಿನ್ನೆ ಮತ್ತು ಇಂದು ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಇಂದು ಜಿಲ್ಲೆಯಲ್ಲಿ ಓರ್ವ ಕೊರೊನಾ ಸೋಂಕಿತ ಗುಣಮುಖರಾಗಿದ್ದು, 9 ಸಕ್ರಿಯ ಪ್ರಕರಣಗಳಿವೆ.