ದಕ್ಷಿಣ ಕನ್ನಡ/ಕಡಬ: ಕೊರೊನಾ ಸೋಂಕು ಹರಡದಂತೆ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆ ಪೊಲೀಸರು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಇದಕ್ಕೆ ಕ್ಯಾರೇ ಎನ್ನದೇ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿಸಿರುವ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ನಿನ್ನೆ ನೆಡೆದಿದೆ.
ರಾಮಕುಂಜ ಗ್ರಾಮ ಪಂಚಾಯತಿ ಕಚೇರಿ, ರಾಮಕುಂಜೇಶ್ವರ ಪ.ಪೂ. ಕಾಲೇಜು ಹಾಗೂ ಎರಡು ಅಂಗಡಿಗಳಿಗೆ ಕಳೆದ ರಾತ್ರಿ ನುಗ್ಗಿರುವ ಕಳ್ಳರು, ಹಣ ದೋಚಿ ಪರಾರಿಯಾಗಿದ್ದಾರೆ. ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಇಂಟರ್ನೆಟ್ ಮೋಡೆಮ್ ದೋಚಿದ್ದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿರುವ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿನ ಎಸ್‌ಬಿಐನ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೂ ನುಗ್ಗಿ ನಗದು ದೋಚಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ದಿನಕರ ಶೆಟ್ಟಿ, ಕಡಬ ಪೊಲೀಸ್ ಠಾಣಾ ಎಸ್‌ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.