ಬಂಟ್ವಾಳ(ದಕ್ಷಿಣ ಕನ್ನಡ): ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಫೈರೋಜ್ ಮತ್ತು ಸುಜಿತ್ ಎಂಬುವವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ ವಗ್ಗದ ಹರೀಶ್ ಹಾಗೂ ಸ್ನೇಹಿತರಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಬಂಟ್ವಾಳದ ಬೈಪಾಸ್ ಬಳಿ ಗುರುವಾರ ರಾತ್ರಿ ಸುಜಿತ್ ಮತ್ತು ಫೈರೋಜ್ ಎಂಬುವವರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡು ಬಿದ್ದಿದ್ದರು. ಈ ಸಂದರ್ಭ ನೆರವಿಗೆ ಬಂದ ಹರೀಶ್ ಮತ್ತಿತರರು, ತಮ್ಮ ವಾಹನದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ, ಫೈರೋಜ್ ಸ್ಥಿತಿ ಕೊಂಚ ಗಂಭಿರವಾಗಿದ್ದರಿಂದ ಹಿರಿಯ ಪತ್ರಕರ್ತ ಆರೀಫ್ ಪಡುಬಿದ್ರಿ ಹಾಗೂ ಎಂಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಗ್ರೂಪಿನ ಸಹಾಯದಿಂದ ಹೆಚ್ಚುವರಿ ಚಿಕಿತ್ಸೆಯನ್ನೂ ಸಹ ಒದಗಿಸಿದ್ದಾರೆ.
ಹರಿಶ್, ಜಗದೀಶ್, ಜನಾರ್ದನ ಗಾಣಿಗ, ರಾಜೇಶ್, ಫೈರೋಜ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಅಗತ್ಯವಾಗಿ ಬೇಕಾದ ರಕ್ತ ಮತ್ತಿತರ ನೆರವು ನೀಡುವುದರ ಮೂಲಕ ಸಹಾಯ ಮಾಡುತ್ತಿದ್ದಾರೆ.
ಈ ವಿಷಯದ ಕುರಿತು ಪತ್ರಕರ್ತ ಆರೀಫ್ ಪಡುಬಿದ್ರಿ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದು, ರಾತ್ರಿ ಹೊತ್ತು, ವಿದ್ಯುತ್ ಆಘಾತವಾದಾಗ ಜಾತಿ, ಮತ, ಧರ್ಮವನ್ನು ಲೆಕ್ಕಿಸಿದೇ ಫೈರೋಜ್ ಅವರನ್ನು ರಕ್ಷಿಸಿದ ಹರೀಶ್ ಮತ್ತು ಅವರ ಸ್ನೇಹಿತರ ಬಳಗದಿಂದಾಗಿ ಮಾನವೀಯತೆ ಇನ್ನೂ ಜೀವಂತ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.