ಮಂಗಳೂರು: ರಾಜ್ಯ ಬಜೆಟ್ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೂ 100 ಕೋಟಿ ರೂ. ಮೀಸಲಾಗಿರಿಸಬೇಕು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಕರಾವಳಿ ಜಿಲ್ಲೆಗಳ ಆರ್ಥಿಕಾಭಿವೃದ್ಧಿ ಯೋಜನೆಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳಿಗೆ ತಮ್ಮ ಜಿಲ್ಲೆಗಳು ಸಂಪೂರ್ಣ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕೆಂಬ ಕನಸು ಇರುತ್ತದೆ. ಆದ್ದರಿಂದ ಅಭಿವೃದ್ಧಿ ಪ್ರಾಧಿಕಾರಗಳೂ ಪೂರ್ಣ ಪ್ರಮಾಣದ ಅಧಿಕಾರ ಹೊಂದುವ ಸಂಸ್ಥೆ ಆಗಬೇಕು. ಇಂತಹ ಸಂಸ್ಥೆಗಳು ಶಾಸನಬದ್ಧ ಮಂಡಳಿಗಳಾದರೆ ಮಾತ್ರ ಸಂಪೂರ್ಣವಾಗಿ ರಾಜಕೀಯ ವ್ಯಕ್ತಿಗಳು ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್, ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.