ಮಂಗಳೂರು: ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗು ಯುವ ನಾಯಕ ಕನ್ನಯ್ಯ ಕುಮಾರ್ ಉತ್ತರಿಸಿದ್ರು.
ಬಿ.ವಿ.ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾವೆಲ್ಲಾ ಹೆಮ್ಮೆ ಪಡುವ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹೊಸ್ತಿಲಲ್ಲಿ ಇದ್ದೇವೆ. ದಯವಿಟ್ಟು ಒಮ್ಮೆ ಜೈ ಹಿಂದ್, ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ಹೇಳಿದ್ರು.
ಅದೇ ರೀತಿ ನೀವೇಕೆ ಏಕರಾಷ್ಟ್ರದ ವಿರುದ್ಧ ಇರುವಿರಿ ಎಂದು ವಿದ್ಯಾರ್ಥಿನಿ ಕೇಳಿರುವ ಪ್ರಶ್ನೆ ಹಾಗು ಕನ್ಜಯ್ಯಕುಮಾರ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಕರಾಷ್ಟ್ರದ ಬಗ್ಗೆ ಮಾತನಾಡುತ್ತಾ, ನಾನು ನನ್ನ ತಂದೆ ಮತ್ತು ತಾಯಿಯ ಸಹಯೋಗದಿಂದ ಜನಿಸಿದೆ. ನಮ್ಮ ರಾಷ್ಟ್ರ ಒಂದೇ ನಿಜ. ಆದರೆ, ಈ ಏಕರಾಷ್ಟ್ರದಲ್ಲಿರುವ ಸಂವಿಧಾನದಲ್ಲಿ 300ಕ್ಕೂ ಅಧಿಕ ವಿಧಿಗಳಿದೆ. ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ಎರಡು ಸದನಗಳಿವೆ. ನಾವು ಪ್ರತಿಪಾದಿಸುವ ಏಕತೆಯನ್ನು ವಿವಿಧತೆ ಪ್ರತಿನಿಧಿಸುತ್ತದೆ. ಆ ಕಾರಣಕ್ಕಾಗಿ ಭಾರತ ಹೆಚ್ಚು ವೈವಿಧ್ಯತೆಯಿಂದ ಕೂಡಿದೆ. ಜೈಶ್ರೀರಾಮ್ ಘೋಷಣೆ ಕೂಗುವುದು ನಿಮ್ಮ ಸ್ವಾತಂತ್ರ್ಯ. ಆ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿ ಎಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ ಎಂದರು.
ಹೀಗೆ ಮಾತನಾಡುತ್ತಾ, ನೀವು ಪಿಹೆಚ್.ಡಿ ಮಾಡುವುದಾದರೆ ದೇಶದಲ್ಲಿ ಇರುವ 300ಕ್ಕೂ ಹೆಚ್ಚು ರಾಮಾಯಣಗಳ ಬಗ್ಗೆ ಮಾಡಿರಿ. ನೀವು ದೇಶವನ್ನು ಸುತ್ತಾಡಿ. ಹಿಮಾಲಯದ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ದನ ಮೂರ್ತಿ ಮೇಲೆ ಶಿವನ ಮೂರ್ತಿ ಇದೆ. ಇಲ್ಲಿಗೆ ಹಿಂದು ಸಾಧುಗಳು ಬಂದು ಪೂಜೆ ಸಲ್ಲಿಸಿದ ಬಳಿಕ ಬೌದ್ಧ ಬಿಕ್ಕುಗಳು ಬಂದು ಪ್ರದಕ್ಷಿಣೆ ಹಾಕುತ್ತಾರೆ ಎಂದರು.