ಪುತ್ತೂರು: ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಶಾಲೆಯಲ್ಲಿ ಬಿಚ್ಚುವಂತೆ ಹೇಳಿದ ಘಟನೆ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರು, ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಮವಾರ ಮಕ್ಕಳ ಪೋಷಕರು ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿ, ಮತ್ತೆ ಮಕ್ಕಳ ಕೈಗೆ ರಕ್ಷಾಬಂಧನವನ್ನು ಕಟ್ಟಿಸಿದ್ದಾರೆ. ಈ ಮೂಲಕ ಪ್ರಕರಣವು ಸುಖಾಂತ್ಯ ಕಂಡಿದೆ.
ಪಾಪೆಮಜಲು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಬಿಚ್ಚುವಂತೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹೇಳಿದ್ದರು. ಈ ಬಗ್ಗೆ ಅರಿತ ಮಕ್ಕಳ ಪೋಷಕರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ಮತ್ತು ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.
ಮುಖ್ಯೋಪಾಧ್ಯಾಯರು ಹೇಳಿದ್ದೇನು?: ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅದನ್ನು ಬಿಚ್ಚುವಂತೆ ಹೇಳಲಾಗಿತ್ತು. ಬೇರೆ ಯಾವ ಉದ್ದೇಶದಿಂದ ಅಲ್ಲ. ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವು ತುಂಬಾ ಕಪ್ಪಾಗಿತ್ತು. ಈ ಹಿನ್ನೆಲೆ ಮಕ್ಕಳ ಆರೋಗ್ಯ ಕಾಳಜಿಯಿಂದಾಗಿ ಅದನ್ನು ಬಿಚ್ಚಿಡುವಂತೆ ಹೇಳಲಾಗಿತ್ತು ಎಂದರು.
ಪೋಷಕರ ಅಭಿಪ್ರಾಯವೇನು?: ಈ ವೇಳೆ ಮಾತನಾಡಿದ ಮಕ್ಕಳ ಪೋಷಕರು, ರಕ್ಷಾಬಂಧನವನ್ನು ರಕ್ಷಣೆಯ ಸಂಕೇತವಾಗಿ ಕಟ್ಟಲಾಗುವುದೇ ಹೊರತು, ಬೇರೆ ವಿಚಾರದಿಂದಲ್ಲ. ಅದೇ ರೀತಿ ಈ ವರ್ಷ ಕಟ್ಟಿದ ರಕ್ಷಾಬಂಧನವನ್ನು ಮುಂದಿನ ವರ್ಷದಲ್ಲಿಯೇ ಬಿಚ್ಚುವುದಲ್ಲದೆ, ಮಧ್ಯೆ ಎಲ್ಲಿಯೂ ಬಿಚ್ಚಲಾಗುವುದಿಲ್ಲ ಎಂದು ರಕ್ಷಾಬಂಧನದ ಬಗೆಗಿನ ಮಹತ್ವವನ್ನು ತಿಳಿಸಿದರು.
ಗೊಂದಲಕ್ಕೆ ತೆರೆ: ನಂತರ ಪೋಷಕರ ಬಳಿಯಲ್ಲಿದ್ದ ರಕ್ಷಾಬಂಧನವನ್ನು ಶಾಲಾ ಮುಖ್ಯೋಪಾಧ್ಯಾಯರು ತೆಗೆದುಕೊಂಡು ಮಕ್ಕಳಿಗೆ ಕಟ್ಟಿದರು. ಈ ಮೂಲಕ ಶಾಲೆಯಲ್ಲಿ ರಕ್ಷಾಬಂಧನವನ್ನು ಬಿಚ್ಚಿಸಿದ ಗೊಂದಲದ ವಿಚಾರಕ್ಕೆ ತೆರೆ ಎಳೆಯಲಾಯಿತು. ಹಾಗೆಯೇ ಈ ವಿಚಾರವನ್ನು ಇಲ್ಲಿಯೇ ಬಿಡುವುದಾಗಿ ಪೋಷಕರು ತಿಳಿಸಿದರು.
ಇದನ್ನೂ ಓದಿ: ಮಂಗಳೂರು: ಮದರಸಾ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ
ಪಾಪೆಮಜಲು ಶಾಲಾ ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ರವರು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಪ್ರಶಸ್ತಿ ವಿತರಣಾ ವಿಚಾರದಲ್ಲಿಯೂ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ರಾಜೇಶ್ ಪೆರಿಗೇರಿ, ವಿಶಾಕ್ ರೈ, ನಾರಾಯಣ್ ಚಾಕೋಟೆ, ಬಾಲಕೃಷ್ಣ ಕಾವು ಹಾಗೂ ಮತ್ತಿತರರು ಉಪಸ್ಥಿತರಿದ್ದರು.