ಮಂಗಳೂರು: ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಅಲ್ಲಲ್ಲಿ ನಡೆಯುತ್ತಲಿವೆ. ಆದರೆ, ಅದನ್ನು ಸಮರ್ಥವಾಗಿ ಎದುರಿಸಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಕೆಲ ಪ್ರಕರಣಗಳು ಪೊಲೀಸ್ ಠಾಣೆಯವರೆಗೂ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಪಡೆ ಆರಂಭವಾಗಿದೆ.
ಉಳ್ಳಾಲದ ವೀರರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಸಮರ ಸಾರಿದ ಧೀರ ಮಹಿಳೆ. ಕಡಲ ನಗರಿಯ ಈ ವೀರ ಮಹಿಳೆಯ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಅಬ್ಬಕ್ಕ ಪೊಲೀಸ್ ಪಡೆ ವಿಭಾಗ ಆರಂಭಿಸಿದೆ. ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಿಂದ ಕೇಂದ್ರೀಕರಿಸಿ ಈ ಅಬ್ಬಕ್ಕ ಪಡೆ ಮಂಗಳೂರಿನ ವಿವಿಧ ಭಾಗದಲ್ಲಿ ಕಾರ್ಯಾಚರಿಸಲಿದೆ. 50 ಮಂದಿ ಈ ತಂಡದಲ್ಲಿದ್ದು ನಿಗದಿತ ಸ್ಥಳದಲ್ಲಿ ಕಾರ್ಯಾಚರಿಸಲಿದ್ದಾರೆ. ಮಾಲ್, ಪ್ರವಾಸಿತಾಣ, ಬಸ್ ನಿಲ್ದಾಣ, ಶಾಲಾ-ಕಾಲೇಜುಗಳಲ್ಲಿ ಈ ಅಬ್ಬಕ್ಕ ಪಡೆಯ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಮತ್ತು ಮಹಿಳಾ ಪೊಲೀಸರನ್ನೊಳಗೊಂಡ ಈ ತಂಡದಲ್ಲಿ ಒಬ್ಬರು ಎಸ್.ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದು, ನಗರದಲ್ಲಿರುವ ಆಯಕಟ್ಟಿನ ಪ್ರದೇಶದಲ್ಲಿ ನಾಲ್ಕು ಮಂದಿ ತಂಡದಂತೆ ಕಾರ್ಯನಿರ್ವಹಿಸಲಿದೆ. ಇಂತಹ ಹತ್ತು ತಂಡ ನಗರದಲ್ಲಿ ಕರ್ತವ್ಯ ನಿರ್ವಹಿಸಲಿವೆ.