ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಬೇಕೆಂದು ಮುಸ್ಲಿಂ ರಾಷ್ಟ್ರಗಳು ಪಿಎಫ್ಐ ಸಂಘಟನೆಗೆ 120 ಕೋಟಿ ರೂ. ಕೊಟ್ಟಿರೋದು ಸಾಬೀತಾಗುತ್ತಿದೆ. ಅದೇ ಹಣದಲ್ಲಿ ಇಂದು ದೇಶಾದ್ಯಂತ ಹೋರಾಟ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಜನಜಾಗೃತಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಈ ದೇಶದ ರಾಷ್ಟ್ರೀಕೃತ ಬ್ಯಾಂಕ್ಗಳ 73 ಖಾತೆಗಳಿಗೆ 120 ಕೋಟಿ ರೂ. ಹಣ ಜಮೆಯಾಗಿದೆ. ದೇಶದ ಕಾನೂನನ್ನು ವಿರೋಧಿಸಲು ಭಯೋತ್ಪಾದಕ ಸಂಘಟನೆಗಳು ಹಣ ಕೊಡುತ್ತಿವೆ. ಆದ್ದರಿಂದ ನಾವೆಲ್ಲರೂ ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೆ ಇದ್ದೇವೆ ಎಂದು ಒಕ್ಕೊರಳಲ್ಲಿ ಹೇಳೋಣ ಎಂದು ಕರೆ ಕೊಟ್ಟರು.
ಪೌರತ್ವ ಕಾಯ್ದೆಯು ಈ ದೇಶದಲ್ಲಿ ಹುಟ್ಟಿರುವ ಯಾವುದೇ ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಸಿಖ್, ಜೈನರಿಗೆ ಅನ್ವಯವಾಗುವುದಿಲ್ಲ. ಈ ಕಾಯ್ದೆ ಕೇವಲ 2014ರ ಡಿಸೆಂಬರ್ 31ರ ಒಳಗೆ ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ನೊಂದು ಮನೆ-ಮಠ, ಕುಟುಂಬದವರನ್ನು ಕಳೆದುಕೊಂಡು ಈ ದೇಶಕ್ಕೆ ಬಂದಿದ್ದಾರೋ ಅವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಮಂಗಳೂರಿನ ಮುಸ್ಲಿಮರಿಗೂ ಪೌರತ್ವ ಕಾಯ್ದೆಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಕೇರಳದ ಮುಸ್ಲಿಮರು ಹಿಂದೂಗಳ ಅಂಗಡಿ, ಟ್ಯಾಕ್ಸಿಗಳಿಗೆ ಬಹಿಷ್ಕಾರ ಹಾಕೋಕೆ ಮುಂದಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಗೂ ನಿಮಗೂ ಏನು ಸಂಬಂಧ? ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಈ ದೇಶದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿದೆ. ಅದಕ್ಕಾಗಿ ಈ ದೇಶದ ಮುಸ್ಲಿಮರನ್ನು, ಅಲ್ಪಸಂಖ್ಯಾತರನ್ನು ಬಿಜೆಪಿ ಸರ್ಕಾರದ ವಿರುದ್ಧ ಎತ್ತಿಕಟ್ಟುವಂತಹ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.