ಮಂಗಳೂರು: ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ಇದು ಪೂರ್ವಯೋಜಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಚದುರಂಗದಾಟದಲ್ಲಿ ಬೆಂಕಿ ಹಚ್ಚಬೇಕು, ಗಲಭೆ ನಡೆಯಬೇಕು ಎಂದು ಕಾಂಗ್ರೆಸ್ ಪ್ರೇರೇಪಣೆ ನೀಡಿದೆ. ಮಂಗಳೂರು ಹಿಂಸಾಚಾರಕ್ಕೆ ಒಂದು ದಿನ ಮೊದಲು, ಮಾಜಿ ಸಚಿವ ಯು.ಟಿ.ಖಾದರ್ ರಾಜ್ಯದಲ್ಲಿ ಬೆಂಕಿ ಹಾಕುತ್ತೇನೆ ಎಂದಿದ್ದರು. ಪೊಲೀಸರು ಮುಸ್ಲಿಂ ಮುಖಂಡರನ್ನು ಕರೆದು ಶಾಂತಿ ಕಾಪಾಡಲು ಮಾತುಕತೆ ನಡೆಸಿದರೂ ಕೆಲವು ಜನ ಇದರ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಗೆ ಕಾಂಗ್ರೆಸ್ ನೇರ ಕಾರಣವಾಗಿದ್ದು, ಜಿಲ್ಲೆಯ ಹೊರಗಿನವರು ಹಿಂಸಾಚಾರ ನಡೆಸಿದ ಬಗ್ಗೆ ಮಾಹಿತಿ ಇದೆ. ಕಾಶ್ಮೀರದ ಶೈಲಿಯಲ್ಲಿ ಕಲ್ಲು ಹೊಡೆದಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಈ ಕೃತ್ಯಕ್ಕೆ ಕಾಂಗ್ರೆಸ್ ಕಾರಣ ಎಂದ ಶೋಭಾ ಕರಂದ್ಲಾಜೆ:
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಕೇರಳದಿಂದ ಬಂದ ಯುವಕರಿಂದ ನಡೆದಿದೆ ಎಂದು ಆಪಾದಿಸಿದ್ದಾರೆ.
ಪಿಎಫ್ಐ, ಎಸ್ಡಿಪಿಐ ನಾಯಕರು ಮಂಗಳೂರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಈ ಘಟನೆ ನಡೆದಿದೆ. ಹೊರ ರಾಜ್ಯದಿಂದ ಬಂದ ಯುವಕರು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದು ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರು ಘಟನೆಗೆ ಕಾಂಗ್ರೆಸ್ ನೇರ ಕಾರಣವಾಗಿದ್ದು ಯು.ಟಿ. ಖಾದರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾಷಣ ಮಾಡಿದ 24 ಗಂಟೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ನೇರಹೊಣೆ ಕಾಂಗ್ರೆಸ್ ಹೊರಬೇಕು ಎಂದರು.
ಅತ್ಯಂತ ಶಾಂತವಾಗಿದ್ದ ಮಂಗಳೂರಿನಲ್ಲಿ ಗಲಭೆ ನೋಡದೆ ಬಹಳ ವರ್ಷವಾಗಿತ್ತು. ಇಲ್ಲಿನ ಜನರು ಶಾಂತಿಯುತವಾಗಿ ಬದುಕುತ್ತಿದ್ದರು. ಬಂದರು ಪೊಲೀಸ್ ಠಾಣೆಯ ಸುತ್ತಲೂ ದುಷ್ಕರ್ಮಿಗಳು ಠಾಣೆಯ ಶಸ್ತ್ರಾಸ್ತ್ರ ಕೊಂಡೊಯ್ಯುವ ಸಾಧ್ಯತೆ ಇತ್ತು. ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲೆಸೆತ ಮಾಡಿದ್ದಾರೆ. ಒಟ್ಟು ಘಟನೆ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.