ಮಂಗಳೂರು: ನಗರದಲ್ಲಿ ನಿನ್ನೆ ಸುರಿದ ಮಳೆಗೆ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಂಡ ವ್ಯಾಪಾರ ಕೇಂದ್ರದಲ್ಲಿ ಸಂಭವಿಸಿದ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಪರಿಶೀಲನಾ ಸಮಿತಿ ಒತ್ತಾಯಿಸಿದೆ.
ಕೊರೊನ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರ್ಕೆಟ್ ಅನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಗೊಳಿಸಲಾಗಿತ್ತು. ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆ ಹಾಗೂ ನಿನ್ನೆ ಸುರಿದ ಮಳೆಗೆ ಸಂಭವಿಸಿದ ನಷ್ಟದ ಕುರಿತು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪರಿಶೀಲನಾ ಸಮಿತಿರಚಿಸಲಾಗಿತ್ತು. ಸಮಿತಿಯು ಎಪಿಎಂಸಿಗೆ ಭೇಟಿ ನೀಡಿ ವ್ಯಾಪಾರಸ್ಥರ ಅಹವಾಲುಗಳು ಸ್ವೀಕರಿಸಿತು.
ವ್ಯಾಪಾರಸ್ಥರಿಗೆ ಸೌಕರ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಇದರಿಂದ ನಿನ್ನೆ ಸುರಿದ ಮಳೆಗೆ ಲಕ್ಷಾಂತರ ರೂ. ಮೌಲ್ಯದ ತರಕಾರಿ ನೀರು ಪಾಲಾಗಿದೆ. 30 ವರ್ಷಗಳ ಹಿಂದೆ ನಿರ್ಮಿಸಲಾದ ಎಪಿಎಂಸಿ ಯಾರ್ಡ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಹಾಗೂ ಸಮರ್ಪಕ ಶೌಚಾಲಯದ ವ್ಯವಸ್ಥೆಯಿಲ್ಲ. ವರ್ತಕರು ಅಲ್ಲಲ್ಲಿ ಪ್ಲಾಸ್ಟಿಕ್ ಟರ್ಪಾಲ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಎಪಿಎಂಸಿಯ ಕೊಠಡಿಗಳಲ್ಲಿ ಮೇಲ್ಛಾವಣಿ ಕಿತ್ತು ಹೋಗಿದೆ. ಸರಿಯಾದ ಶಟರ್ ವ್ಯವಸ್ಥೆ, ವಿದ್ಯುತ್ ದೀಪಗಳು ಇಲ್ಲ ಎಂದು ಆರೋಪಿಸಿದರು.