ಮಂಗಳೂರು: 2ನೇ ಹಂತದ ಕೊರೊನಾ ಸೋಂಕು ರಾಜ್ಯಕ್ಕೆ ಬಂದಲ್ಲಿ ಯಾವ ರೀತಿ ಎದುರಿಸಲಾಗುತ್ತದೆ ಹಾಗೂ ಸೋಂಕು ಎದುರಿಸಲು ಜನತೆಯ ತಯಾರಿ ಯಾವ ರೀತಿ ಇರಬೇಕೆಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಎರಡನೇ ಹಂತದ ಕೊರೊನಾ ಎದುರಿಸಲು ಯಾವ ರೀತಿ ತಯಾರಿ ನಡೆಸಬೇಕು ಎಂದು ಜನರಲ್ಲಿ ಗೊಂದಲವಿದೆ. ಈ ಹಿನ್ನೆಲೆ ಸರ್ಕಾರ ಯಾವೆಲ್ಲಾ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಬೇಕು ಎಂದರು.
ರಾಜ್ಯ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳು ವೈಜ್ಞಾನಿಕವಾಗಿರಬೇಕೇ ಹೊರತು ರಾಜಕೀಯವಾಗಿರಬಾರದು. ನೈಟ್ ಕರ್ಫ್ಯೂ ಆದೇಶವನ್ನು ಮೂರು ಬಾರಿ ಬದಲಾವಣೆ ಮಾಡಿದೆ. ವೈದ್ಯಕೀಯ ಸಚಿವರು ತೀರ್ಮಾನವನ್ನು ಆದೇಶಿಸುವುದು, ಸಿಎಂ ರದ್ದುಗೊಳಿಸುವುದು ಗಂಟೆಗೊಂದು ನಿರ್ಧಾರ ಪ್ರಕಟಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.
ಕೊರೊನಾ ಬಳಿಕ ಮತ್ತೆ ಪ್ರತಿಭಟನೆಗಳಲ್ಲಿ ಎನ್ಆರ್ಸಿ, ಸಿಎಎ ಜಾರಿಗೊಳಿಸಲು ಬಿಡುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಪ್ರಧಾನಿ ನರೇಂದ್ರ ಮೋದಿ ಅವರು ಎನ್ಆರ್ಸಿ ವಿಚಾರವನ್ನೇ ಇನ್ನು ತೆಗೆದುಕೊಂಡಿಲ್ಲ ಎಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಆದ್ದರಿಂದ ಮತ್ತೆ ಅದು ಸಂಸತ್ತಿನಲ್ಲಿಯೇ ಚರ್ಚೆಗೆ ಬರುವವರೆಗೆ ಯಾರೂ ಗೊಂದಲಪಡುವ ಅಗತ್ಯವಿಲ್ಲ ಎಂದರು.
ಅಮಿತ್ ಶಾ ಕೊರೊನಾ ಬಳಿಕ ಎನ್ಆರ್ಸಿ ವಿಚಾರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ ಎಂಬ ವಿಚಾರಕ್ಕೆ ಖಾದರ್ ಪ್ರತಿಕ್ರಿಯಿಸಿ, ಅಮಿತ್ ಶಾ ಅವರು ಈ ದೇಶದ ಪ್ರಧಾನಿಯೇ, ಪ್ರಧಾನಿಗಿಂತಲೂ ಇವರ ಮಾತು ಸಂಸತ್ತಿನಲ್ಲಿ ಮಿಗಿಲಾಗುತ್ತದಯೇ. ಹೊರಗೆ ಮಾತನಾಡುವುದಕ್ಕೂ ಸಂಸತ್ತಿನಲ್ಲಿ ಮಾತನಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಕೆಲವರು ಗೊಂದಲಕ್ಕೊಳಗಾಗಲು ಪ್ರತಿಕ್ರಿಯೆ ನೀಡುತ್ತಾರೆ. ಆದ್ದರಿಂದ ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.