ಬಂಟ್ವಾಳ(ದಕ್ಷಿಣ ಕನ್ನಡ): ಕೊರೊನಾ ಸೋಂಕು ದೃಢಪಟ್ಟು ಬಿ.ಸಿ.ರೋಡಿನ ಮೂವರು ವೈದ್ಯರು ಸೇರಿದಂತೆ ಒಂದೇ ಕುಟುಂಬದ ಐವರು ಕಳೆದ ವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿ, ಭಯ ಬೇಡ ಎಚ್ಚರವಿರಲಿ ಎಂಬ ಸಂದೇಶ ನೀಡಿದ್ದಾರೆ.
ಬಿ.ಸಿ. ರೋಡ್ನ ಕೈಕಂಬ ಸಮೀಪದ ಮನೆಯೊಂದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗುಲಿತ್ತು. ಬಳಿಕ ಅವರ ತಂದೆ, ತಾಯಿ, ಪತ್ನಿ, ಮಗನಿಗೂ ಸೋಂಕು ದೃಢಪಟ್ಟಿತ್ತು. ರೋಗ ಲಕ್ಷಣವಿಲ್ಲದಿದ್ದರೂ ಸೋಂಕು ದೃಢಪಟ್ಟಿದ್ದ ಕಾರಣ ಅವರೆಲ್ಲರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಯಾವುದೇ ತೊಂದರೆ ಇಲ್ಲದೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ನಿನ್ನೆ ಮರಳಿದ್ದೇವೆ. ವಯಸ್ಸಾದವರಿಗೂ ಯಾವುದೇ ರೋಗಲಕ್ಷಣ ಇಲ್ಲದಿದ್ದರೆ ಬೇಗನೆ ಗುಣವಾಗುತ್ತದೆ. ಕೊರೊನಾ ಕುರಿತು ಭಯ ಬೇಡ. ಆದರೆ ಎಚ್ಚರ ಖಂಡಿತಾ ಇರಬೇಕು ಎಂದು ಸಂದೇಶ ನೀಡಿದ್ದಾರೆ.