ಬೆಳ್ತಂಗಡಿ (ದಕ್ಷಿಣ ಕನ್ನಡ): ನಿನ್ನೆ ಬೆಳಗ್ಗೆ ಮಂಗಳೂರಿನಲ್ಲಿ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಕಾಡುಕೋಣವೊಂದು ಆಕಸ್ಮಿಕ ಸಾವನ್ನಪ್ಪಿದೆ. ನಿನ್ನೆ ಸಂಜೆ ಕಾಡುಕೋಣವನ್ನು ಕಲ್ಮಂಜ ಗ್ರಾಮದ ನಿಡಿಗಲ್ ಅರಣ್ಯದಲ್ಲಿ ದಹನ ಮಾಡಲಾಗಿದೆ.
ಮಂಗಳೂರಿನಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದ ಕಾಡುಕೋಣವನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟು ಬರಲು ಸಿದ್ಧತೆ ಮಾಡಲಾಗಿತ್ತು. ಆದರೆ ಸತತ ನಾಲ್ಕು ಗಂಟೆ ಸುತ್ತಾಡಿ ಬಸವಳಿದಿದ್ದ ಕಾಡುಕೋಣ ಚಾರ್ಮಾಡಿ ತಲುಪುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿತ್ತು. ಬಳಿಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಮರಣೋತ್ತರ ಪರೀಕ್ಷೆ ಕೈಗೊಂಡು ನಿಡಿಗಲ್ ಅರಣ್ಯದಲ್ಲಿ ದಹನ ಕಾರ್ಯ ನಡೆಸಲಾಯ್ತು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ಮತ್ತು ಸಿಬ್ಬಂದಿಗಳು, ಮಂಗಳೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.