ಮಂಗಳೂರು (ದಕ್ಷಿಣ ಕನ್ನಡ): ನವಮಂಗಳೂರು ಬಂದರಿಗೆ ಈ ವರ್ಷದ ಏಳನೇ ಕ್ರೂಸ್ ಹಡಗು MV INSIGNIA (ಎಂವಿ ಇನ್ಸ್ಗ್ನಿಯ) ಬುಧವಾರ ಆಗಮಿಸಿತು. 466 ಪ್ರಯಾಣಿಕರು ಮತ್ತು 399 ಸಿಬ್ಬಂದಿ ಹೊತ್ತ ಮಾರ್ಷಲ್ ಐಲ್ಯಾಂಡ್ ಧ್ವಜದ ಹಡಗು ನವಮಂಗಳೂರಿನ ಬಂದರಿನ ಬರ್ತ್ ನಂ. 04ರಲ್ಲಿ ಲಂಗರು ಹಾಕಿತ್ತು.
ಐಷಾರಾಮಿ ಹಡಗು ಫುಜೈರಾ, ಮುಂಬೈ ಮತ್ತು ಮರ್ಮಗೋವಾ ಬಂದರಿನಿಂದ ಹೊರಟು ಮಂಗಳೂರಿಗೆ ಬಂದಿದೆ. ಇದಾದ ಬಳಿಕ ಕೊಚ್ಚಿನ್ ಬಂದರಿಗೆ ಪ್ರಯಾಣಿಸಿದೆ. ಹಡಗಿನ ಒಟ್ಟಾರೆ ಉದ್ದ 180.05 ಮೀಟರ್ ಆಗಿದ್ದು, 30,277 ಒಟ್ಟು ಟನ್ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ. ನಾರ್ವೇಜಿಯನ್ ಕ್ರೂಸ್ ಲೈನ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಮಿಯಾಮಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಓಷಿಯಾನಿಯಾ ಕ್ರೂಸಸ್ ಒಡೆತನದಲ್ಲಿ ಈ ಹಡಗು ಇದೆ.
ಹಡಗಿನಿಂದ ಇಳಿಯುವಾಗ ಡ್ರಮ್ ಬಾರಿಸುವ ಮೂಲಕ ಕ್ರೂಸ್ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಯಾಣಿಕರಿಗೆ ಆಹ್ಲಾದಕರ ಅನುಭವಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ತ್ವರಿತ ಸಂಚಾರಕ್ಕಾಗಿ ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರದಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳನ್ನು ಪ್ರವಾಸ ಮಾಡಲು ಪ್ರಯಾಣಿಕರಿಗೆ ಬಸ್ ಮತ್ತು ಟ್ಯಾಕ್ಸಿಗಳ ವ್ಯವಸ್ಥೆ ಮಾಡಲಾಗಿತ್ತು. ಕ್ರೂಸ್ ಪ್ರಯಾಣಿಕರು ಕ್ರೂಸ್ ಲಾಂಜ್‌ನೊಳಗೆ ಆಯುಷ್ ಇಲಾಖೆ ಸ್ಥಾಪಿಸಿದ ಧ್ಯಾನ ಕೇಂದ್ರದ ಪ್ರಯೋಜನಗಳನ್ನು ಪಡೆದರು.
ಪ್ರವಾಸಿಗರಿಗೆ ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಸಹ ತೆರೆಸಲಾಗಿದ್ದು, ಪ್ರವಾಸೋದ್ಯಮ ಸಚಿವಾಲಯ, ಸರ್ಕಾರದ ಸೆಲ್ಫಿ ಸ್ಟ್ಯಾಂಡ್ ಸೆಟಪ್‌ನ ಮುಂಭಾಗದಲ್ಲಿ ಪ್ರವಾಸಿಗರು ಫೋಟೋಗಳನ್ನು ಕ್ಲಿಕ್ ಮಾಡಿದರು. ಪ್ರಯಾಣಿಕರ ಮನರಂಜನೆಗಾಗಿ ಬಂದರು ಕ್ರೂಸ್ ಲಾಂಜ್‌ನಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಯಾಣಿಕರು ವಿವಿಧ ಪ್ರವಾಸಿ ತಾಣಗಳಲ್ಲದೆ, ಮಂಗಳೂರಿನ ಅಚಲ್ ಗೋಡಂಬಿ ಕಾರ್ಖಾನೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ, ಪಿಲಿಕುಳ ಕುಶಲಕರ್ಮಿ ಗ್ರಾಮ, ಸಾವಿರ ಕಂಬಗಳ ಬಸದಿ ಮತ್ತು ಸೋನ್ಸ್ ಫಾರಂಗೆ ಭೇಟಿ ನೀಡಿದರು. ಕ್ರೂಸ್ ಪ್ರಯಾಣಿಕರು ತಮ್ಮ ಹಡಗಿಗೆ ಹಿಂತಿರುಗುವಾಗ ಅವರಿಗೆ ಮಂಗಳೂರು ಭೇಟಿಯ ನೆನಪಿಗಾಗಿ ಸ್ಮರಣಿಕೆಗಳನ್ನು ನೀಡಲಾಯಿತು.
ಫೆ. 7ರಂದು ಆಗಮಿಸಿತ್ತು MS NAUTICA ಹಡಗು: ನವಮಂಗಳೂರು ಬಂದರಿಗೆ ಐದನೇ ಪ್ರವಾಸಿ ಹಡಗು MS NAUTICA ಕಳೆದ 7ರಂದು ಆಗಮಿಸಿತ್ತು. ಈ ಹಡಗಿನಲ್ಲಿ 550 ಪ್ರಯಾಣಿಕರು ಮತ್ತು 400 ಸಿಬ್ಬಂದಿ ಇದ್ದು, ಇದೂ ಕೂಡ ಬರ್ತ್ ನಂಬರ್ 04 ರಲ್ಲಿ ಲಂಗರು ಹಾಕಿತ್ತು. NAUTICA ಹಡಗಿನ ಒಟ್ಟಾರೆ ಉದ್ದ 180.5 ಮೀಟರ್ ಇದ್ದು 30,277 ಒಟ್ಟು ಟನ್ ಸಾಗಾಟ ಸಾಮರ್ಥ್ಯ ಮತ್ತು 6.0 ಮೀಟರ್ಗಳ ಆಳ ಹೊಂದಿದೆ.
ಇದನ್ನೂ ಓದಿ: ನವ ಮಂಗಳೂರು ಬಂದರಿಗೆ ಐಷಾರಾಮಿ ಪ್ರವಾಸಿ ಹಡಗು MS NAUTICA ಆಗಮನ