ಮಂಗಳೂರು: ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾರೆ. ಸುರತ್ಕಲ್ನ ಕಾನ ಬಾಳದ ರೂಪಶ್ರೀ (23) ಸಾವನ್ನಪ್ಪಿದವರು. ಸ್ವಾತಿ, ಹಿತ್ನವಿ, ಕೃತಿಕಾ, ಯತಿಕಾ ಗಾಯಗೊಂಡಿದ್ದಾರೆ.
ಸಂಜೆ 4 ಗಂಟೆಯ ಸುಮಾರಿಗೆ ಐವರು ಯುವತಿಯರು ಮಂಗಳೂರು ಕಾರ್ಪೊರೇಷನ್ ಈಜುಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಎಸ್.ಎಲ್.ಶೆಟ್ ಜ್ಯುವೆಲರ್ಸ್ ಬಳಿಯ ಫುಟ್‌ಪಾತ್ ಬಳಸಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಫುಟ್‌ಪಾತ್ ಮೇಲೇರಿ ಬಂದ ಕಾರು ಡಿಕ್ಕಿ ಹೊಡೆದಿದೆ. ಹೋಂಡಾ ಇಯಾನ್ ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಮಣ್ಣಗುಡ್ಡ ಜಂಕ್ಷನ್‌ನಿಂದ ಲೇಡಿಹಿಲ್ ಕಡೆಗೆ ತೆರಳುತ್ತಿದ್ದ. ಅಜಾಗರೂಕತೆಯ ಚಾಲನೆಯಿಂದ ಕಾರನ್ನು ಫುಟ್‌ಪಾತ್ ಮೇಲೆ ಚಲಾಯಿಸಿದ್ದಾನೆ. ಘಟನೆಯ ನಂತರ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದ.
ನಂತರ ಕಾರನ್ನು ಹೋಂಡಾ ಶೋರೂಂ ಮುಂದೆ ನಿಲ್ಲಿಸಿ, ಮನೆಗೆ ತೆರಳಿ ತಂದೆಯೊಂದಿಗೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಬರಿಮಲೆಗೆ ತರಳುತ್ತಿದ್ದ ಬಸ್ ಅಪಘಾತ: ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಯಾತ್ರಿಕರ ಬಸ್ ಇಂದು ಬೆಳಗ್ಗೆ ಕೊಟ್ಟಾಯಂನಲ್ಲಿ ಅಪಘಾತಕ್ಕೀಡಾಗಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 40 ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಎರುಮೇಲಿ ಸಮೀಪದ ಕನಮಾಲ ಬಳಿ ಅಪಘಾತಕ್ಕೀಡಾಗಿದೆ. ಕೋಲಾರ ಜಿಲ್ಲೆಯ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್‌ನಲ್ಲಿ 40 ಯಾತ್ರಾರ್ಥಿಗಳು ಸೇರಿ ಒಟ್ಟು 43 ಮಂದಿ ಇದ್ದರು. 13ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಟ್ ಆ್ಯಂಡ್ ರನ್: ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ. 10 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಊಟಕ್ಕೆಂದು ಹೊರಗಡೆ ಹೋಗಿ ಮುಗಿಸಿಕೊಂಡು ಬರುವಾಗ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್ಗೇಟ್ ಹತ್ತಿರದ ಟ್ರಕ್ ಬೇ ಬಳಿ ಇರುವ ಡಿವೈಡರ್ ಮೇಲೆ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಯುವಕರ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ವಿಜಯಪುರ ವಜ್ರಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ : ಕೆಟ್ಟು ನಿಂತಿದ್ದ ಲಾರಿಗೆ ವಾಹನಗಳು ಡಿಕ್ಕಿ.. ಎರಡು ಗಂಟೆ ಸಂಚಾರ ವ್ಯತ್ಯಯ