ಮಂಗಳೂರು: ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯಾದ್ಯಂತ ಜೂ.8 ರಿಂದ ದೇವಾಲಯ ತೆರೆಯಲು ಶನಿವಾರ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾರ್ಚ್ ನಿಂದ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ದೇವಾಲಯ ತೆರೆಯಬಹುದು ಎಂಬ ಆದೇಶದ ಹಿನ್ನೆಲೆಯಲ್ಲಿ ಎರಡು ತಿಂಗಳ ಬಳಿಕ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಸ್ವಚ್ಛತೆ ದೃಷ್ಟಿಯಿಂದ ದೇವಾಲಯವನ್ನು ಪೂರ್ತಿ ಶುಚಿಗೊಳಿಸಿ ಸ್ಯಾನಿಟೈಸೇಷನ್ ಮಾಡಲಾಗಿದೆ.
ನಾಳೆ ಬೆಳಗ್ಗೆ ಲೋಕಕಲ್ಯಾರ್ಥವಾಗಿ, ಕೊರೊನಾ ಮಹಾಮಾರಿಯ ಮುಕ್ತಿಗಾಗಿ ಬೆಳಗ್ಗೆ 8.30ಗೆ ಧನ್ವಂತರಿ ಯಾಗ, 11.30ಕ್ಕೆ ಶ್ರೀ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಲಿದೆ.
ನಾಳೆ ಭಕ್ತರ ಪ್ರವೇಶ ಅನುವು ಮಾಡಿರುವುದರಿಂದ ಸರ್ಕಾರದ ಆದೇಶದಂತೆ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ದೇವಾಲಯ ಪ್ರವೇಶಿಸಬೇಕು. ದೇವಸ್ಥಾನದ ದ್ವಾರದ ಬಳಿಯೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಕೈಶುಚಿಗೊಳಿಸಿಯೇ ದೇವಾಲಯದ ಒಳಗೆ ಆಗಮಿಸಬೇಕು. ಅಲ್ಲದೆ ಸ್ಕ್ರೀನಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಭಕ್ತರು ಗಂಟೆ ಹೊಡೆಯುವಂತಿಲ್ಲ.
ಮೂರ್ತಿ ಇತ್ಯಾದಿ ದೇವಾಲಯದ ಸೊತ್ತುಗಳನ್ನು ಮುಟ್ಟುವಂತಿಲ್ಲ. ಅಲ್ಲದೆ ತೀರ್ಥ, ಗಂಧ ಪ್ರಸಾದ ವಿತರಣೆ ಮಾಡಲಾಗುತ್ತಿಲ್ಲ. ಆದರೆ ಪ್ಯಾಕೇಟ್ ಪ್ರಸಾದ ನೀಡುವ ವ್ಯವಸ್ಥೆ ಇದೆ. ಅದೇ ರೀತಿ ದೇವಸ್ಥಾನ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಅದೇ ರೀತಿ ದ.ಕ. ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಹೊರತುಪಡಿಸಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ, ಕೊಲ್ಲೂರು ಶ್ರೀ ಮೂಕಾಂಬಿಕಾ, ಬಪ್ಪನಾಡು, ಮಂಗಳಾದೇವಿ, ಕದ್ರಿ, ಪೊಳಲಿ ಮುಂತಾದ ದೇವಾಲಯಗಳು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿವೆ. ಇಲ್ಲಿಯೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಕ್ತರ ಪ್ರವೇಶಕ್ಕೆ ಅನುವು ಮಾಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.