ಮಂಗಳೂರು : ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಕನ್ನಡ ಶಾಲೆಗಳಲ್ಲಿ ವಿವಿಧ ಮೂಲ ಸೌಕರ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದನ್ನು ತಪ್ಪಿಸಲು ಮಂಗಳೂರಿನ ಅನುದಾನಿತ ಶಾಲೆಯ ಶಿಕ್ಷಕರು ಮಾದರಿ ಕಾರ್ಯವನ್ನು ಮಾಡುತ್ತಿದ್ದಾರೆ.
ಮಂಗಳೂರಿನ ಗೋರಿಗುಡ್ಡದ ಯುಬಿಯಂಸಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಜೊತೆಗೆ ಶಿಕ್ಷಕರು ನಿವೃತ್ತರಾಗುತ್ತಿದ್ದಂತೆ ಶಿಕ್ಷಕರ ಸಂಖ್ಯೆಯು ಕಡಿಮೆಯಾಗುತ್ತಿತ್ತು. ಈ ಸಂಬಂಧ ಶಾಲೆಯ ನಾಲ್ವರು ಸರ್ಕಾರಿ ಶಿಕ್ಷಕರು ಶಾಲೆಯ ಅಭಿವೃದ್ಧಿ ಮಾಡಿ ಮಕ್ಕಳನ್ನು ಸೆಳೆಯಲು ತಮ್ಮ ಸಂಬಳದ ಒಂದು ಪಾಲನ್ನು ಮೀಸಲಿಡುವ ತೀರ್ಮಾನ ಮಾಡಿದರು.
ವೇತನದ ಒಂದು ಪಾಲನ್ನು ಶಾಲೆಗೆ ನೀಡುವ ಶಿಕ್ಷಕರು : ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆಯ ಹೆಡ್ ಮಾಸ್ಟರ್ ವಜ್ರಕಾಂತಿ, ಶಿಕ್ಷಕರಾದ ಶ್ರೀಕೃಷ್ಣ ಎನ್, ಬಾಲಕೃಷ್ಣ ಹಾಗೂ ರಘುನಾಥ ಭಟ್ ಅವರು ಕಳೆದ ಮೂರು ವರ್ಷದಿಂದ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ರೂ 10 ಸಾವಿರವನ್ನು ಶಾಲೆಯ ಅಭಿವೃದ್ಧಿಗಾಗಿ ನೀಡುತ್ತಿದ್ದಾರೆ. ಈ ಶಾಲೆಯ ಶಿಕ್ಷಕರು ತಾವು ದುಡಿದ ಸಂಬಳದಲ್ಲಿ ವರ್ಷಕ್ಕೆ 1.20ಲಕ್ಷ ರೂ. ಹಣವನ್ನು ದೇಣಿಗೆ ನೀಡುತ್ತಿದ್ದಾರೆ.
ಗೋರಿಗುಡ್ಡದ ಯುಬಿಯಂಸಿ ಹಿರಿಯ ಪ್ರಾಥಮಿಕ ಶಾಲೆ, ಕಿಟ್ಟೆಲ್ ಮೆಮೋರಿಯಲ್ ಪ್ರೌಢಶಾಲೆ, ಕಿಟ್ಟೆಲ್ ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಒಟ್ಟಾಗಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಒಬ್ಬರು, ಪ್ರೌಢಶಾಲೆಯಲ್ಲಿ ನಾಲ್ವರು ಹಾಗೂ ಕಾಲೇಜಿನಲ್ಲಿ 6 ಖಾಯಂ ಪ್ರಾಧ್ಯಾಪಕರಿದ್ದಾರೆ. 90 ವರ್ಷಗಳ ಇತಿಹಾಸವಿರುವ ಪ್ರಾಥಮಿಕ ಶಾಲೆ, ನಾಲ್ಕು ದಶಕಗಳ ಹಳೆಯದಾದ ಪ್ರೌಢಶಾಲೆಯನ್ನು ಉಳಿಸಲು ಪ್ರೌಢಶಾಲೆಯ ನಾಲ್ವರು ಶಿಕ್ಷಕರು ಈ ಕ್ರಮಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದರಿಂದ ಆತಂಕಗೊಂಡ ಶಿಕ್ಷಕರಾದ ಶ್ರೀಕೃಷ್ಣ ಎನ್. ಹಾಗೂ ಬಾಲಕೃಷ್ಣ ಅವರು ಚಿಕ್ಕಮಗಳೂರು, ಶಿವಮೊಗ್ಗದ ಕಾಫಿ ಎಸ್ಟೇಟ್ಗಳಿಗೆ ಭೇಟಿ ನೀಡಿ ಅಲ್ಲಿನ ಕೂಲಿ ಕಾರ್ಮಿಕರ ಮನವೊಲಿಸಿ ಮಕ್ಕಳನ್ನು ಬಾಲಿಕಾಶ್ರಮದಲ್ಲಿ ಉಳಿಸಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡುವಲ್ಲಿ ಶ್ರಮಿಸಿದ್ದಾರೆ.
ಶಿಕ್ಷಕರ ನಿವೃತ್ತಿಯಿಂದ ಶಿಕ್ಷಕರ ಸಂಖ್ಯೆ ಕಡಿಮೆಯಾಗಿರುವುದರಿಂದ 7 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಈ ಅತಿಥಿ ಶಿಕ್ಷಕರಿಗೆ ಸಂಬಳ ಕೊಡಿಸಲು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಶಿಕ್ಷಕರು ತಮ್ಮ ಸಂಬಳದಲ್ಲಿ ನಿಗದಿತ ಮೊತ್ತವನ್ನು ತೆಗೆದಿರಿಸುತ್ತಾರೆ. ಈ ನಾಲ್ವರು ಶಿಕ್ಷಕರು ಪ್ರತಿ ತಿಂಗಳು ಹತ್ತು ಸಾವಿರ ನೀಡುತ್ತಿದ್ದರೆ, ಶಾಲೆ ಉಳಿಸುವ ಯೋಜನೆಗೆ ಉಳಿದ ಶಿಕ್ಷಕರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯೂ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ತಮ್ಮ ಕೈಲಾದ ಮೊತ್ತವನ್ನು ಶಾಲೆಗೆ ನೀಡುತ್ತಿದ್ದಾರೆ.
ಈ ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು, ಅನಾಥ ಮಕ್ಕಳೂ ಇದ್ದಾರೆ. ಅನುದಾನಿತ ಶಾಲೆಯಾದರೂ ಇಲ್ಲಿ ಶಿಕ್ಷಣದಿಂದ ಹಿಡಿದು, ಸಮವಸ್ತ್ರ, ಸ್ಕೂಲ್ ಬಸ್ ಚಾರ್ಜ್, ನೋಟ್ ಬುಕ್ಸ್, ಎಲ್ಲವೂ ಉಚಿತ. ಇವೆಲ್ಲವೂ ಶಿಕ್ಷಕರ ದೇಣಿಗೆ ಮತ್ತು ಇತರ ದಾನಿಗಳಿಂದ ಸಂದಾಯವಾಗುತ್ತದೆ. ಶಾಲಾ ಬಸ್ ಡೀಸೆಲ್ ಹಾಗೂ ಚಾಲಕನ ಸಂಬಳ ತಿಂಗಳಿಗೆ 40 ಸಾವಿರವಾಗುತ್ತದೆ. ಜೊತೆಗೆ ಅತಿಥಿ ಶಿಕ್ಷಕರಿಗೆ ನೀಡುವ ಸಂಬಳವನ್ನೂ ಶಿಕ್ಷಕರ ಮತ್ತು ದಾನಿಗಳ ಹಣದಲ್ಲಿ ನೀಡಲಾಗುತ್ತಿದೆ.
ಮಕ್ಕಳಿಗೆ ವಿವಿಧ ಸೌಲಭ್ಯದೊಂದಿಗೆ ಉಚಿತ ಶಿಕ್ಷಣ : ಈ ಬಗ್ಗೆ ಮಾತನಾಡಿದ ಕಿಟೆಲ್ ಮೆಮೋರಿಯಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಜ್ರಕಾಂತಿ ಅವರು, 1982ರಲ್ಲಿ ಈ ಶಾಲೆ ಆರಂಭವಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದ್ದರಿಂದ 7 ನೇ ತರಗತಿ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವುದರಿಂದ ಪ್ರೌಢಶಾಲೆ ಆರಂಭಿಸಲಾಯಿತು. ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯ ಸಿಗಬೇಕು ಮತ್ತು ಅವರು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ನಮ್ಮ ವೇತನದ ಒಂದು ಭಾಗವನ್ನು ಶಾಲೆಗೆ ನೀಡುತ್ತಿದ್ದೇವೆ. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಣದಿಂದ ವಂಚಿತರಾದವರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಹೇಳಿದರು.
ಶಿಕ್ಷಕ ಶ್ರೀ ಕೃಷ್ಣ ಮಾತನಾಡಿ, ಈ ಶಾಲೆಗೆ ಬರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಸಕಲೇಶಪುರ, ಚಿಕ್ಕಮಗಳೂರಿನಿಂದ ವಿದ್ಯಾರ್ಥಿಗಳು ಬಂದಿದ್ದು, ಅವರಿಗೆ ಬಾಲಿಕಾಶ್ರಮದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದು ಅವರಿಗೆ ವಾಹನ ವ್ಯವಸ್ಥೆ ಮಾಡಿದ್ದೇವೆ. ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದ್ದು, ಈ ಸಂದರ್ಭದಲ್ಲಿ ಬಜಾಲ್ ಪಡ್ಪುವಿನ 20 ವಿದ್ಯಾರ್ಥಿಗಳು ನಮ್ಮ ಶಾಲೆಗೆ ಬಂದರು. ಆಗ ಅವರಿಗೆ ಬಸ್ ಸೌಕರ್ಯ ಕಲ್ಪಿಸಲಾಯಿತು.
ಶಾಲೆಗೆ ವೇತನದಿಂದ 10 ಸಾವಿರ ತಿಂಗಳಿಗೆ ನೀಡುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಬಸ್ ವ್ಯವಸ್ಥೆ, ಡೀಸೆಲ್, ಡ್ರೈವರ್ ವೇತನ, ಅತಿಥಿ ಶಿಕ್ಷಕರಿಗೆ ವೇತನ ಕೊಡುತ್ತಿದ್ದೇವೆ. ಈಗ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಂಗಳಕ್ಕೆ ಇಂಟರ್ ಲಾಕ್, ಕುಡಿಯುವ ನೀರಿನ ವ್ಯವಸ್ಥೆ, ಶಾಲೆಗೆ ಸುಣ್ಣ, ಬಿಸಿಯೂಟಕ್ಕೆ ಕೋಣೆ, ಬಸ್ ಗೆ ಶೆಲ್ಟರ್ ಗಳನ್ನು ದಾನಿಗಳ ಸಹಕಾರದೊಂದಿಗೆ ಮಾಡುತ್ತಿದ್ದೇವೆ. ಇದರಿಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 50ರಿಂದ 150ಕ್ಕೆ ಹೆಚ್ಚಳವಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ಉಚಿತ ಯೂನಿಫಾರ್ಮ್, ಉಚಿತ ಪುಸ್ತಕ ನೀಡುತ್ತಿದ್ದೇವೆ. ನಾವು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಗಣೇಶೋತ್ಸವ.. ಗಮನ ಸೆಳೆಯುತ್ತಿದೆ ಅಕ್ಕಲಕೋಟ ಸ್ವಾಮಿ ಸಮರ್ಥ ಮಹಾರಾಜರ ಮಂದಿರದ ಪ್ರತಿರೂಪ