ಪುತ್ತೂರು (ದಕ್ಷಿಣಕನ್ನಡ): ಕರಾವಳಿ ಭಾಗದಲ್ಲಿ ಅನಾವೃಷ್ಟಿಗಿಂತ ಅತಿವೃಷ್ಟಿಯೇ ಅನಾಹುತಗಳನ್ನ ಮಾಡುತ್ತದೆ. ಅತಿವೃಷ್ಟಿ, ಪ್ರವಾಹದಿಂದ ಜೀವಹಾನಿ, ಬೆಳೆಹಾನಿ ಸೇರಿದಂತೆ ಯಾವುದೇ ತೊಂದರೆಗಳಾಗದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಕ್ಷಣ ಪೂರ್ವ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ರಕ್ಷಣೆಗಾಗಿ ಸಿದ್ಧತಾ ಕ್ರಮಗಳ ಕುರಿತು ನಡೆದ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿಗಳನ್ನ ಪಿಡಿಒಗಳ ನೇತೃತ್ವದಲ್ಲಿ ಕೂಡಲೇ ರಚಿಸಬೇಕು. ಗ್ರಾಮ ಮಟ್ಟದ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೊಂದಿರಬೇಕು. ಕೊರೊನಾ ಆತಂಕ, ಮಳೆ ಹಾನಿಯ ಜತೆಗೆ ಸಾಂಕ್ರಾಮಿಕ ರೋಗಗಳನ್ನ ನಿಯಂತ್ರಿಸುವ ನಿಟ್ಟಿನಲ್ಲೂ ಸಮರೋಪಾದಿಯಲ್ಲಿ ಸಜ್ಜುಗೊಳ್ಳಬೇಕು ಎಂದರು.
2018 ಹಾಗೂ 19ರ ಸಾಲಿನಲ್ಲಿ ನಮ್ಮ ತಾಲೂಕಿನಲ್ಲೂ ಭೀಕರ ಪ್ರವಾಹ, ಪ್ರಾಕೃತಿಕ ನಷ್ಟ, ಕೃಷಿ ಹಾನಿ ಉಂಟಾಗಿತ್ತು. ಪ್ರತಿ ವರ್ಷ ಜಿಲ್ಲೆಯಲ್ಲಿ 5 ಸಾವಿರ ಮಿ.ಲೀ. ಸರಾಸರಿ ಮಳೆ ಸುರಿಯುತ್ತದೆ. ಆದರೆ ಮಾನ್ಸೂನ್ ಆರಂಭ ಹಾಗೂ ಅಂತ್ಯದ ಸಂದರ್ಭದಲ್ಲೂ ಹಾನಿಗಳು ಉಂಟಾಗುವುದರಿಂದ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಅಪಾಯದ ಸಂದರ್ಭದಲ್ಲಿ ಕಾಳಜಿ ಕೇಂದ್ರಗಳನ್ನ ತೆರೆಯಲು ಸಿದ್ಧರಾಗಬೇಕು ಎಂದು ತಿಳಿಸಿದರು.