ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ(Shree Mahalingeshwara Temple)ದಲ್ಲಿ ಇಂದು (ನ. 21) 'ಸ್ವರ್ಣ ತಾಂಬೂಲ ಪ್ರಶ್ನಾ ಚಿಂತನೆ'(swarna tambula prashna chinthana)ಯನ್ನು ಆಯೋಜಿಸಲಾಗಿತ್ತು.
ನಾಡಿನ ಖ್ಯಾತ ಜ್ಯೋತಿರ್‌ವಿದ್ವಾನ್ ಒಳಕುಂಜ ವೆಂಕಟರಮಣ ಭಟ್( Venkataramana Bhat) ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಯಿತು. ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಪೂರ್ವಭಾವಿಯಾಗಿ ಈ ಸ್ವರ್ಣ ತಾಂಬೂಲ ಪ್ರಶ್ನೆ ಜರುಗಿತು.
ಬೆಳಗ್ಗೆ ದೈವಜ್ಞರನ್ನು ದೇವಳದ ರಾಜಗೋಪುರದಲ್ಲಿ ಸ್ವಾಗತಿಸಿ, ಪೂರ್ಣಕುಂಭ ಸ್ವಾಗತದಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅವರು ದೈವಜ್ಞರಿಗೆ ಹಾರಾರ್ಪಣೆ ಮಾಡಿದರು.
![swarna-tambula-prashna](https://etvbharatimages.akamaized.net/etvbharat/prod-images/kn-mng-01-smt-puttur-script-kac10010_21112021163847_2111f_1637492927_940.jpg)
ದೇವಳದ ಪ್ರಾಕಾರಗೊಡಿಗಳಲ್ಲಿ ನಮಸ್ಕರಿಸಿ, ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮಾಡಿದರು. ನಂತರ ಗೋಪುರದಲ್ಲಿ ದೇವಳದ ಆತಿಥ್ಯಕ್ಕೆ ಸಂಬಂಧಿಸಿ ಬೆಲ್ಲ, ನೀರು, ಸೀಯಾಳವನ್ನು ಸ್ಪರ್ಶ ಮಾಡಿ ಮಡಿಯಾದ ಬಳಿಕ ಸ್ವರ್ಣಪ್ರಶ್ನೆ ಆರಂಭಿಸಿದರು.
ನ.29ರಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ. ಈ ಮೂಲಕ ದೇವಳದ ಅಭಿವೃದ್ಧಿ ಕಾರ್ಯಗಳು ಮತ್ತು ದೋಷಗಳ ಕುರಿತಂತೆ ತಿಳಿದುಕೊಳ್ಳಲು ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.
![swarna-tambula-prashna-chinthana-in-shree-mahalingeshwara-temple-at-putturu](https://etvbharatimages.akamaized.net/etvbharat/prod-images/kn-mng-01-smt-puttur-script-kac10010_21112021163847_2111f_1637492927_130.jpg)
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್, ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ ಡಾ. ಸುಧಾ ಎಸ್ ರಾವ್, ಕಾರ್ಯನಿರ್ವಾಹಣಾಧಿಕಾರಿ ನವಿನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ ಜಗನ್ನಿವಾಸ ರಾವ್, ದೇವಳದ ವಾಸ್ತು ಇಂಜಿನಿಯರ್ ಪಿ. ಜಿ ಜಗನ್ನಿವಾಸ ರಾವ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಓದಿ: ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಭಾರಿ ಹಾನಿ: ಸಂಜೆ ಅಧಿಕಾರಿಗಳ ತುರ್ತು ಸಭೆ ಕರೆದ ಸಿಎಂ