ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರದಲ್ಲಿ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಹಾನಿಯಾಗುತ್ತಿದೆ ಎಂದು ಸ್ವಾಮೀಜಿಗಳು ಸೇರಿದಂತೆ ನಾಗರಿಕರು ಪ್ರತಿಭಟನೆ ನಡೆಸಿದರು.
ಬಂಟ್ವಾಳದ ಕಾರಿಂಜದಲ್ಲಿನ ಗಣಿಗಾರಿಕೆಯನ್ನು ಜಿಲ್ಲಾಧಿಕಾರಿಗಳು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ವಿಭಾಗದ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ 'ರುದ್ರಗಿರಿಯ ಭಕ್ತರ ನಡಿಗೆ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ' ಎಂದು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಸಿದರು.
ಈ ಪ್ರತಿಭಟನಾ ಸಭೆಯಲ್ಲಿ ತಪೋನಿಧಿ ನಾಗಸಾಧು ಬಾಬಾ ವಿಠಲಗಿರಿ ಮಹಾರಾಜ್, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಓಂ ಶ್ರೀ ಮಠದ ನಿತ್ಯಾನಂದ ಸರಸ್ವತಿ ಸ್ವಾಮೀಜಿ, ಓಂ ಶ್ರೀ ಮಠದ ಮಾತಾನಂದಮಯಿ ರಸ್ತೆಯಲ್ಲಿ ಕುಳಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಪೋನಿಧಿ ನಾಗಸಾಧು ಬಾಬಾ ವಿಠಲಗಿರಿ ಮಹಾರಾಜ್ ಅವರು, ಕಾರಿಂಜದ ಶಿವಸಾನ್ನಿಧ್ಯವನ್ನು ಉಳಿಸಲು ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಪ್ರಾಣ ಕೊಟ್ಟಾದರೂ ಕಾರಿಂಜ ಕ್ಷೇತ್ರ ಉಳಿಸಲು ನಾವು ಸಿದ್ಧರಾಗಿದ್ದೇವೆ. ಇದನ್ನು ನಿಲ್ಲಿಸದಿದ್ದಲ್ಲಿ ನಾಗಾ ಸಾಧುಗಳ ಅಖಾಡವನ್ನು ಮಂಗಳೂರಿಗೆ ಕರೆಸಿ ಬುದ್ದಿ ಕಲಿಸುತ್ತೇವೆ ಎಂದು ಹೇಳಿದರು.
ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನಮ್ಮನ್ನು ರಸ್ತೆಯಲ್ಲಿ ಕೂರುವಂತೆ ಮಾಡಿದ ವ್ಯವಸ್ಥೆ ಬಗ್ಗೆ ನೋವಾಗಿದೆ. ಇವರು ಕಾನೂನು ಪಾಲಿಸಲು ಸಾಧ್ಯವಾಗದಿದ್ದರೆ ಕಾನೂನು ಇರುವುದು ಉಪ್ಪು ಹಾಕಿ ನೆಕ್ಕಲಿಕ್ಕ? ಗಣಿಗಾರಿಕೆಯಿಂದ ದೇವಸ್ಥಾನ ಬಿರುಕುಬಿಟ್ಟಿದ್ದು, ಧ್ವಜಸ್ಥಂಭವಾಲಿದೆ. ಇದನ್ನು ನಿಲ್ಲಿಸಲು ನಿಮಗೆ ಭಯವಿರಬಹುದು.
ನಮಗೆ ಆ ಭಯ ಇಲ್ಲ. ಮೂರು ಸಾವಿರ ಸ್ವಯಂ ಸೇವಕರು ಅಲ್ಲಿಗೆ ಹೋಗಿ ನಿಲ್ಲಿಸುತ್ತೇವೆ. ನ್ಯಾಯಕ್ಕಾಗಿ ಜೈಲಿಗೆ ಹೋಗಲು ಸಿದ್ದರಿದ್ದೇವೆ. ಐದು ದಿನಗಳೊಳಗೆ ಗಣಿಗಾರಿಕೆ ನಿಲ್ಲಿಸದಿದ್ದರೆ ನಾವೇ ಅದನ್ನು ಮಾಡುತ್ತೇವೆ ಎಂದರು. ಪ್ರತಿಭಟನಾ ಸಭೆಯಲ್ಲಿ ಓಂ ಶ್ರೀ ಮಠದ ಸ್ವಾಮೀಜಿ ಸೇರಿದಂತೆ ಮುಖಂಡರುಗಳು ಮಾತನಾಡಿ, ಜಿಲ್ಲಾಧಿಕಾರಿಗಳು ಗಣಿಗಾರಿಕೆ ನಿಲ್ಲಿಸಲು ಆದೇಶಿಸುವಂತೆ ಆಗ್ರಹಿಸಿದರು.
ಓದಿ: ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣು ; ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯ!