ಮಂಗಳೂರು: ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಕೋಸ್ಟ್ ಗಾರ್ಡ್ ಕೂಡ ವಿನೂತನ ಅಭಿಯಾನ ಆರಂಭಿಸಿದೆ.
ಮಂಗಳೂರಿನಲ್ಲಿ ಕರ್ನಾಟಕ ಕೋಸ್ಟ್ ಗಾರ್ಡ್ ಸ್ವಚ್ಛತಾ ಅಭಿಯಾನಕ್ಕಾಗಿ ಪ್ಲಾಗಿಂಗ್ ಎಂಬ ವಿನೂತನ ಪ್ರಯೋಗ ಮಾಡುತ್ತಿದೆ. ಜಾಗಿಂಗ್ ಮಾಡುವಾಗಲೇ ಕಸವನ್ನು ಹೆಕ್ಕುವ ಮೂಲಕ ಪರಿಸರವನ್ನು ಶುಚಿಗೊಳಿಸುವುದು ಪ್ಲಾಗಿಂಗ್ ಉದ್ದೇಶ. ಈ ಮೂಲಕ ಸಾಮಾನ್ಯ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ ಉದ್ದೇಶ ಇವರದು.
ಸೆ. 1ರಿಂದ 15ರವರೆಗೆ ನಗರದ ವಿವಿಧ ಭಾಗಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಘನತ್ಯಾಜ್ಯಗಳ ವಿಲೇವಾರಿ ಮಾಡುವ ಸ್ವಚ್ಛತಾ ಪಕ್ವಾಡ್ ಎಂಬ ಕಾರ್ಯ ಕೈಗೊಳ್ಳಲಾಗಿದ್ದು, ಇಂದು ಅದರ ಭಾಗವಾದ ಪ್ಲಾಗಿಂಗ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಿಎಸ್ಎಫ್ಐನ ಎನ್ಎಂಪಿಟಿ ಯುನಿಟ್, ಎಂಆರ್ಪಿಎಲ್ ಯುನಿಟ್ ಹಾಗೂ ಕೆಐಒಸಿಎಲ್ ಯುನಿಟ್ ಜಂಟಿಯಾಗಿ ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿವೆ.
ನಗರದ ಪಣಂಬೂರು ಬೀಚ್ ಪರಿಸರದಲ್ಲಿ ಪ್ಲಾಗಿಂಗ್ ಆಯೋಜಿಸಲಾಗಿತ್ತು. ಇದೇ ರೀತಿ ಬೆಂಗ್ರೆ ಪರಿಸರ, ಚಿತ್ರಾಪುರ, ಸೂರತ್ಕಲ್, ಗುರುಪುರ ನದಿ ಪರಿಸರಗಳಲ್ಲಿಯೂ ಕರ್ನಾಟಕ ಕೋಸ್ಟ್ ಗಾರ್ಡ್ ಸ್ವಚ್ಛತಾ ಕಾರ್ಯ ನಡೆಸಲಿದೆಯಂತೆ. ನೂರಾರು ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.