ಪುತ್ತೂರು(ದಕ್ಷಿಣ ಕನ್ನಡ): ತಾಲೂಕಿನ ಬಲ್ನಾಡು ಗ್ರಾಮದಲ್ಲಿ ನೈಸರ್ಗಿಕವಾಗಿ ಹರಿಯುತ್ತಿರುವ ನೀರಿಗೆ ಟರ್ಬೈನ್ ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಸುರೇಶ್ ಎಂಬುವರು, ಕಳೆದ 17 ವರ್ಷಗಳಿಂದ ತಮ್ಮ ಮನೆಗೆ ಅವಶ್ಯಕತೆ ಇರುವ ವಿದ್ಯುತ್ಅನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದಾರೆ.
ಸುರೇಶ್ ಅವರ ತೋಟದಲ್ಲಿ ಸುಮಾರು 60 ಅಡಿ ಎತ್ತರದಲ್ಲಿರುವ ಹಳ್ಳದ ನೀರನ್ನು ಕೊಳವೆಯ ಮೂಲಕ ಟರ್ಬೈನ್ಗೆ ಹರಿಸಿ 2 ಕೆವಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಸುರೇಶ್ ಕುಟುಂಬ ವರ್ಷದಲ್ಲಿ 9 ತಿಂಗಳು ಇದೇ ವಿದ್ಯುತ್ ಬಳಸುತ್ತಿದೆ. ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ಈ ಟರ್ಬೈನ್ಗೆ ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್ ನಲ್ಲೇ ಉಳಿಸಿಕೊಂಡಿದ್ದಾರೆ. ಇತರರಿಗೂ ಅವಕಾಶವಿದ್ದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಅಂತಾರೆ ಸುರೇಶ್.
ಪ್ರಗತಿಪರ ಕೃಷಿಕರಾಗಿರುವ ಸುರೇಶ್, ನೈಸರ್ಗಿಕವಾಗಿ ಹರಿಯುವ ನೀರನ್ನು ತಮ್ಮ ತೋಟಕ್ಕೆ ಬಳಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಯನ್ನೂ ಮಾಡ್ತಿದ್ದಾರೆ. ಈ ಕಿರು ಜಲವಿದ್ಯುತ್ ಘಟಕವನ್ನು ವೀಕ್ಷಿಸಲು ಹಾಗೂ ಮಾಹಿತಿ ಪಡೆದುಕೊಳ್ಳಲು ರಾಜ್ಯದ ನಾನಾ ಭಾಗಗಳ ಜನರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.
ಇರುವ ಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ, ಜತೆಗೆ ಇತರರಿಗೂ ಸ್ಫೂರ್ತಿ.