ಮಂಗಳೂರು: ವಾರದ ಹಿಂದೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಲಾಗಿದೆ ಎಂದು ಹಾಸನದಿಂದ ವರದಿಯಾಗಿತ್ತು. ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಅಂಗನವಾಡಿಗಳಿಗೂ ಕೊಳೆತ ಮೊಟ್ಟೆ ಪೂರೈಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಟೆಂಡರ್‌ದಾರರ ಮೂಲಕ ಮೊಟ್ಟೆ ಪೂರೈಕೆ ಮಾಡುವುದರಿಂದ ಕೊಳೆತ ಮೊಟ್ಟೆ ಸರಬರಾಜು ಆಗುತ್ತಿದೆ. ಬಾಲವಿಕಾಸ ಸಮಿತಿಯ ಮೂಲಕವೇ ಮೊಟ್ಟೆ ನೀಡುವ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಲಾಗಿದೆ.
ಬಂಟ್ವಾಳದ ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆ ಪೂರೈಕೆಯಾಗಿರುವುದು ಪತ್ತೆಯಾಗಿದೆ. ಇದರ ಜತೆಗೆ ಮಂಗಳೂರಿನ ಚಿಲಿಂಬಿ, ಬೊಂದೆಲ್, ಮರಕಡ, ಕಾವೂರು ಸೇರಿದಂತೆ ಹಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳು ಕೊಳೆತಿವೆ. ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಹಾಳಾಗಿರುವ ಮೊಟ್ಟೆಗಳನ್ನು ವಿತರಿಸಲಾಗಿದೆ. ಮೊಟ್ಟೆಗಳನ್ನು ಮನೆಯಲ್ಲಿ ಬೇಯಿಸಿದಾಗ, ಒಳಗಡೆ ಕಪ್ಪಾಗಿವೆ ಎಂದು ಬಾಣಂತಿಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಒಂದೊಂದು ಅಂಗನವಾಡಿಗೆ 400-500ರಷ್ಟು ಮೊಟ್ಟೆ ಪೂರೈಕೆ ಆಗುತ್ತದೆ. ಒಂದೆರಡು ಬಿಟ್ಟರೆ ಉಳಿದ ಮೊಟ್ಟೆಗಳು ಹಾಳಾಗಿವೆ. ಪ್ರತಿ ಅಂಗನವಾಡಿ ವ್ಯಾಪ್ತಿಯಲ್ಲೂ ಬಾಣಂತಿಯರು, ಗರ್ಭಿಣಿಯರಿಗೆ ಮೊಟ್ಟೆಗಳನ್ನು ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ. ತಿಂಗಳ ಆರಂಭದಲ್ಲಿ ಮೊಟ್ಟೆ ಬಂದ ಕೂಡಲೇ ಅದನ್ನು ಮನೆಯವರಿಗೆ ತಲುಪಿಸಲಾಗುತ್ತದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಬೇಯಿಸಿದ ಸಂದರ್ಭದಲ್ಲೂ ಪೂರ್ತಿ ಹಾಳಾಗಿದ್ದು, ಕೆಲವಂತೂ ಕೊಳೆತು ನಾರುತ್ತಿದ್ದಲ್ಲದೆ ಹುಳಗಳು ಹರಿದಾಡುತ್ತಿತ್ತು" ಎಂದು ಅಂಗನವಾಡಿ ಸಹಾಯಕಿಯರು ದೂರಿದ್ದಾರೆ.
ಎರಡು ತಿಂಗಳ ಬಳಿಕ ಮಂಗಳೂರಿನಲ್ಲಿ ಜುಲೈ 11ರಂದು ಗುತ್ತಿಗೆ ಕಂಪನಿ ಮೊಟ್ಟೆ ಪೂರೈಸಿತ್ತು. ಜೂನ್ ತಿಂಗಳ ಮೊಟ್ಟೆಯನ್ನು ಗುತ್ತಿಗೆದಾರ ಕಳೆದ ವಾರ ಪೂರೈಸಿದ್ದರು. ವಿಜಯಪುರ ಮೂಲದ ಬಸವೇಶ್ವರ ಹೆಸರಿನ ಕೋಳಿ ಮೊಟ್ಟೆ ಪೂರೈಸುವ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಕೆ ಪ್ರತಿಕ್ರಿಯಿಸಿ, "ಅಂಗನವಾಡಿಗಳಿಗೆ ಈ ಹಿಂದೆ ಇದ್ದ ಬಾಲವಿಕಾಸ ಸಮಿತಿಗೆ ಹಣ ಹಾಕಿದಾಗ ಅವರೇ ಸ್ಥಳೀಯವಾಗಿ ಮೊಟ್ಟೆ ಖರೀದಿ ಮಾಡುತ್ತಿದ್ದರು. ಸರಕಾರದ ಹೊಸ ನಿಯಮದಂತೆ ಈಗ ಗುತ್ತಿಗೆಯ ಮೂಲಕ ಮಾಡಲಾಗುತ್ತಿದೆ. ಕೊಳೆತ ಮೊಟ್ಟೆ ಪೂರೈಕೆಯಾಗುತ್ತಿದ್ದರೆ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪ ಬೋವಿ ಮಾತನಾಡಿ, "ಈಗಾಗಲೇ ಗುತ್ತಿಗೆದಾರನಿಗೆ ಮೂರು ನೋಟಿಸ್ ನೀಡಲಾಗಿದೆ. ಕಳಪೆ ಮೊಟ್ಟೆ ಪೂರೈಕೆ ಮಾಡಿದರೆ ಅದಕ್ಕೆ ಹಣ ಪಾವತಿ ಮಾಡದೇ ಮತ್ತೆ ಮೊಟ್ಟೆ ವಾಪಸ್ ನೀಡಲು ಹೇಳಿದ್ದೇನೆ. ಇಂತಹ ಸಮಸ್ಯೆಗಳು ಮರುಕಳಿಸಿದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸುತ್ತೇವೆ" ಎಂದರು.
ಇದನ್ನೂ ಓದಿ: ಕೊಳೆತ ಮೊಟ್ಟೆ ಪೂರೈಕೆ: ಆತಂಕಕ್ಕೊಳಗಾಗಿರುವ ಅಂಗನವಾಡಿ ಮಕ್ಕಳು, ಗರ್ಭಿಣಿಯರು