ಬೆಳ್ತಂಗಡಿ: ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆ ತಾಲೂಕಿನಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಸ್ತಬ್ಧಗೊಂಡಿದ್ವು. ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆಯು ಚೆಕ್ ಪೋಸ್ಟ್ ನಿರ್ಮಿಸಿ ಬಂದೋಬಸ್ತ್ ಕಲ್ಪಿಸಿತ್ತು. ಹಾಲು, ಗೂಡ್ಸ್, ತರಕಾರಿ, ಮೀನಿನ ಸಾಗಾಟ, ಆ್ಯಂಬುಲೆನ್ಸ್, ಮದುವೆ ಸಮಾರಂಭಗಳಿಗೆ ತೆರಳುವ ವಾಹನಕ್ಕಷ್ಟೇ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು.
ವೇಣೂರು, ಸಂತೆಕಟ್ಟೆ, ಚಾರ್ಮಾಡಿ, ಧರ್ಮಸ್ಥಳ, ಗುರುವಾಯನಕೆರೆ ಇನ್ನಿತರೆ ಕಡೆಗಳಲ್ಲಿ ಚೆಕ್‌ಪೋಸ್ಟ್ ರಚಿಸಿ ಅನಗತ್ಯ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಲಾಗಿತ್ತು. ತಾಲೂಕಿನ ಬಹುತೇಕ ಔಷಧ ಮಳಿಗೆಗಳು, ಆಸ್ಪತ್ರೆಗಳ ಸೇವೆಗಳನ್ನು ಯಥಾಸ್ಥಿತಿ ಮುಂದುವರೆಸಲಾಗಿತ್ತು. ಉಳಿದಂತೆ ಪೇಟೆ, ಗ್ರಾಮೀಣ ಪ್ರದೇಶಗಳು ಸ್ತಬ್ಧವಾಗಿತ್ತು. ಬೆಳಗ್ಗೆ 7 ಗಂಟೆ ಬಳಿಕ ಹಾಲು, ಪತ್ರಿಕೆ ಮಳಿಗೆಗಳೂ ಸಹ ತೆರೆದಿರಲಿಲ್ಲ.
ಆ್ಯಂಬ್ಯುಲೆನ್ಸ್ ಹಾಗೂ ಆರೋಗ್ಯ ಸಂಬಂಧಿಸಿದ ತುರ್ತು ಸೇವೆಗಳಿಗಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಯಿತು. ಚಾರ್ಮಾಡಿ ಚೆಕ್ ಪೋಸ್ಟ್‌ನಲ್ಲೂ ವಾಹನ ತಪಾಸಣೆಗೊಳಪಡಿಸಲಾಯಿತು. ಇಂದು ಬೆಳ್ತಂಗಡಿ, ಚಾರ್ಮಾಡಿ ವ್ಯಾಪ್ತಿಯಲ್ಲಿ ಮದುವೆ ಸಮಾರಂಭ ನಡೆದವು. ತಾಲೂಕು ಆಡಳಿತ ಹಾಗೂ ಗ್ರಾಪಂನಿಂದ ಪೂರ್ವ ನಿಯೋಜಿತ ಅನುಮತಿ ಪಡೆಯಲಾಗಿದ್ದು, ಕಾರ್ಯಕ್ರಮಕ್ಕೆ ತೆರಳುವವರಿಗೆ ಅವಕಾಶ ನೀಡಲಾಗಿತ್ತು.