ಸುಳ್ಯ: ಮಂಗಳವಾರ ಮತ್ತು ಬುಧವಾರ ದಕ್ಷಿಣ ಕನ್ನಡದ ಹಲವೆಡೆ ಸುರಿದ ಜಡಿ ಮಳೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಪೆರಿಯಶಾಂತಿ-ಧರ್ಮಸ್ಥಳ ಮಧ್ಯದ ಕೊಕ್ಕಡ ಸಮೀಪದ ಕಿರು ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಕೆಲ ಸಮಯಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಈ ಸೇತುವೆಯ ಕೆಳಗಡೆ ಸರಾಗವಾಗಿ ನೀರು ಹರಿದು ಹೋಗದಿರುವುದರಿಂದ ಈ ರೀತಿ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿದೆ. ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆಯ ಕಡೆಯಿಂದ ಸರಿಯಾಗಿ ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದಿರುವುದರಿಂದ ಬಹುತೇಕ ಎಲ್ಲಾ ಕಡೆಗಳಲ್ಲಿ ರಸ್ತೆಯಲ್ಲೇ ನದಿಯಂತೇ ನೀರು ಹರಿಯುತ್ತಿದೆ. ಮಾತ್ರವಲ್ಲದೇ ಸಣ್ಣ ಹಳ್ಳ, ತೊರೆಗಳು ತುಂಬಿ ಹರಿಯುತ್ತಿದೆ. ಸದ್ಯ ಹೆಚ್ಚಿನ ಅನಾಹುತಗಳು ಸಂಭವಿಸಿದ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಮಧ್ಯಾಹ್ನದ ಸಮಯದಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಸುಳ್ಯ, ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ ಪ್ರದೇಶಗಳಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇದೆ.