ಉಳ್ಳಾಲ: ಯುವಕನೋರ್ವ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಇಲ್ಲಿನ ಸೋಮೇಶ್ವರ ರುದ್ರಪಾದೆ ಬಳಿ ನಡೆದಿದೆ. ಪವನ್ ಭಟ್ (29) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ಎಂಬಿಎ ಮತ್ತು ಇಂಜಿನಿಯರಿಂಗ್ ಪದವಿಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ ಎನ್ನಲಾಗಿದೆ.
ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪವನ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ನಡೆಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತನಾಗಿದ್ದ ಈತ ಉತ್ತಮ ಹಾಡುಗಾರ ಹಾಗೂ ಗಿಟಾರ್ ನುಡಿಸುತ್ತಿದ್ದ. ಕೋವಿಡ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದು ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ.
ಪ್ರತೀ ದಿನ ಸೋಮೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದ ಈತ, ಬುಧವಾರವೂ ದೇವಸ್ಥಾನಕ್ಕೆ ತೆರಳಿ ಬಳಿಕ ರುದ್ರಪಾದೆಯ ಮೇಲಿಂದ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು ನೋಡಿ ಕಿರುಚಿದ್ದಾರೆ. ಸ್ಥಳೀಯ ಮೀನುಗಾರರು ಮತ್ತು ಜೀವರಕ್ಷಕ ಈಜುಗಾರರು ರಕ್ಷಿಸಲು ಮುಂದಾದರು ಸಹ ಪವನ್ ಸಾವನ್ನಪ್ಪಿದ್ದಾನೆ.