ಮಂಗಳೂರು: ಮುಂದಿನ ಗ್ರಾಪಂ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚು ಗ್ರಾಪಂನಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗ್ರಾಪಂ ಚುನಾವಣೆ ಎದುರಿಸಲು ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಆರು ತಂಡಗಳು ರಚನೆಯಾಗಿದೆ. ಈ ತಂಡಗಳು ಗ್ರಾಪಂ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡುವ ಮೂಲಕ 'ಗ್ರಾಮ ಸ್ವರಾಜ್ಯ ಸಮಾವೇಶ' ಮಾಡುವ ನಿರ್ಧಾರವನ್ನು ರಾಜ್ಯ ಸಮಿತಿ ಪ್ರಕಟಿಸಿದೆ ಎಂದು ಹೇಳಿದರು.
ಬಿಜೆಪಿ ಪ್ರತಿಯೊಂದು ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಂಘಟನಾತ್ಮಕವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಸಂಕೇತ ಇರುವುದಿಲ್ಲ. ಆದರೆ ಇಡೀ ಚುನಾವಣೆಯಲ್ಲಿ ನಮ್ಮ ಪಕ್ಷದ ತಂಡ ಕಾರ್ಯಕರ್ತರೊಂದಿಗೆ ಇರಲಿದ್ದಾರೆ. ಕಾರ್ಯಕರ್ತರು ಈ ಚುನಾವಣೆಯಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಪ್ರತಿಯೊಂದು ಗ್ರಾಪಂನಲ್ಲಿ ಅಧಿಕಾರ ಪಡೆಯಬೇಕು ಎಂಬ ಹಿನ್ನೆಲೆಯಲ್ಲಿ, ಕಾರ್ಯಕರ್ತರೊಂದಿಗೆ ಇಡೀ ರಾಜ್ಯದ ತಂಡ ಇರಲಿದೆ ಎಂಬ ಆತ್ಮಸ್ಥೈರ್ಯ ಮೂಡಲು ರಾಜ್ಯದಲ್ಲಿ ಆರು ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.
ಈ ಹಿನ್ನೆಲೆ, ದ.ಕ.ಜಿಲ್ಲೆಯಲ್ಲಿ ನ.28ರಂದು ಎರಡು 'ಗ್ರಾಮ ಸ್ವರಾಜ್ಯ ಸಮಾವೇಶ' ನಡೆಯಲಿದೆ. ಅಂದು ಮೂಡುಬಿದಿರೆ, ಮಂಗಳೂರು ಉತ್ತರ, ಮಂಗಳೂರು ಹಾಗೂ ಬಂಟ್ವಾಳದ ನಾಲ್ಕು ವಿಧಾನ ಸಭಾ ಕ್ಷೇತ್ರದ ಪ್ರಮುಖರನ್ನು ಸೇರಿಸಿ ಬಿ.ಸಿ.ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಥಮ ಸಮಾವೇಶ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಬೆಳ್ತಂಗಡಿ, ಪುತ್ತೂರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಮುಖರನ್ನು ಸೇರಿಸಿ ಪುತ್ತೂರಿನ ಕೊಟಚ ಸಭಾಭವನದಲ್ಲಿ ಸಮಾವೇಶ ನಡೆಯಲಿದೆ ಎಂದು ಸುದರ್ಶನ ಮೂಡುಬಿದಿರೆ ಹೇಳಿದರು.