ಬಂಟ್ವಾಳ : ಬಂಟ್ವಾಳ ಪುರಸಭೆ ವ್ಯಾಪ್ತಿಯ ಮಧ್ಯೆ ಹರಿಯುತ್ತಿರುವ ನೇತ್ರಾವತಿ ನದಿಯ ಪಕ್ಕ ಬೆಳಗ್ಗೆ ಚಿಣ್ಣರು ಬಂದು ಮೊಬೈಲ್ ಹಿಡಿದು ಕುಳಿತುಕೊಳ್ಳಲು ಕಾರಣ, ಇಲ್ಲಿ ನೆಟ್ವರ್ಕ್ ದೊರಕುತ್ತದೆ. ಪುರಸಭೆಯ ಚೆಂಡ್ತಿಮಾರ್ ಮತ್ತು ಮಣಿಹಳ್ಳ ಪರಿಸರದಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಸಹ ಸರಿಯಾಗಿ ಸಿಗುವುದಿಲ್ಲ. ಹಾಗಾಗಿ, ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರ್ತೇವೆ ಅಂತಾರೆ ಪೋಷಕರು.
ಚಂಡ್ತಿಮಾರ್ ಮತ್ತು ಮಣಿಹಳ್ಳ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಕಲಿಯುವ ಮಕ್ಕಳಿಗಂತೂ ಭಾರೀ ಸಂಕಟ ನೀಡುತ್ತಿದೆ. ಪಾಠಗಳನ್ನು ಕೇಳಬೇಕಾದರೆ, ನದಿಯ ಬಳಿಗೆ ಬರಬೇಕು. ನದಿ ತಟದಲ್ಲಿ ಮೊಬೈಲ್‌ನ ಎತ್ತೆತ್ತರಕ್ಕೆ ಹಿಡಿದು ಮಕ್ಕಳು ಇಂಟರ್ನೆಟ್ ಸಿಗ್ನಲ್ಗಾಗಿ ಸರ್ಕಸ್ ಮಾಡುತ್ತಲೇ ಪಾಠ ಕೇಳುತ್ತಾರೆ.
ಸುಮಾರು 250ಕ್ಕೂ ಆಧಿಕ ಮನೆಗಳು ಈ ಪರಿಸರದ ಆಸುಪಾಸಿನಲ್ಲಿವೆ. ಮನೆಯ ಟೆರೇಸ್ ಮೇಲೆ ಇಂಟರ್ನೆಟ್ ದೊರಕುತ್ತದೆ. ತಪ್ಪಿದರೆ, ನೇತ್ರಾವತಿ ತಟವೇ ಗತಿ. ಕೆಲ ದಿನಗಳಿಂದ ಆನ್ಲೈನ್ ತರಗತಿ ಆರಂಭಗೊಂಡಿದ್ದು, ಕ್ಲಾಸ್ ರೂಮ್ ಶಿಕ್ಷಣ ಆರಂಭಗೊಳ್ಳುವವರೆಗೂ ಇದು ತಲೆನೋವಿನ ಸಂಗತಿ.
ಆಫ್‌ಲೈನ್ ಮೂಲಕ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲೂ ವಿದ್ಯಾರ್ಥಿಗಳು ನದಿ ಬಳಿಗೇ ಬರಬೇಕು. ಶಾಲೆಗೆ ಹೋಂ ವರ್ಕ್ ಕಳುಹಿಸಲೂ ಇಲ್ಲಿಗೇ ಬರಬೇಕು. ಮಕ್ಕಳ ಜೊತೆ ಹೆತ್ತವರಿಗೂ ಇದೊಂದು ಶಿಕ್ಷೆ ಎನ್ನುತ್ತಾರೆ ಪೋಷಕಿ ಶಾಂತಲಾ.
ಮಳೆ ಹಿನ್ನೆಲೆ ಕೊಡೆ ಹಿಡಿದು ಪಾಠ ಕೇಳಲು ಕಷ್ಟವಾಗುತ್ತದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಸರಿಯಾಗಿ ಪಾಠ ಅರ್ಥಮಾಡಿಕೊಳ್ಳಲೂ ಆಗುತ್ತಿಲ್ಲ ಎನ್ನುತ್ತಾಳೆ ಹತ್ತನೇ ತರಗತಿ ವಿದ್ಯಾರ್ಥಿನಿ ಸುಪ್ರಿಯಾ.
ಹೋಂ ವರ್ಕ್ ನಾವು ಮಾಡಿದ್ರೂ ಕಳಿಸೋಕೆ ಕಷ್ಟ ಆಗ್ತಿದೆ. ಇಲ್ಲಿಗೆ ಬಂದು ಕಳಿಸಬೇಕಾದರೆ ಅಮ್ಮನೇ ಜೊತೆಯಾಗಬೇಕಾಗುತ್ತದೆ ಎನ್ನುತ್ತಾನೆ 4ನೇ ತರಗತಿ ಪುಟಾಣಿ ದಿಶಾಂತ್.
ಈ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರತಿಕ್ರಿಯಿಸಿದ್ದು, ನೆಟ್ವರ್ಕ್ ಸಮಸ್ಯೆ ಕುರಿತು ಸಂಸದರು, ಡಿಸಿ ಮತ್ತು ಜಿಪಂ ಸಿಇಒ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಇದರ ಅನುಷ್ಠಾನಕ್ಕೆ ಸಂಬಂಧಿಸಿ ತಾಲೂಕಿನಲ್ಲಿ ಶೀಘ್ರ ಸಭೆ ನಡೆಸಲಾಗುವುದು ಎಂದಿದ್ದಾರೆ. ಮಂಗಳವಾರ ಕರೆಂಟ್ ಇಲ್ಲದ ದಿನ ಚಂದನವಾಹಿನಿ ಪಾಠ ಕೇಳಲೂ ನಾವು ನದಿ ತಟಕ್ಕೆ ಬಂದು ಮೊಬೈಲ್ನಲ್ಲಿ ಕೇಳಬೇಕಾಗುತ್ತದೆ ಎಂಬ ಅಳಲು ಪೋಷಕರಾದ ರಮ್ಯಾ ಅವರದ್ದಾಗಿದೆ.