ಮಂಗಳೂರು: ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೋಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೈ ತಾಗಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂದುವರಿದ ಜಗಳದಲ್ಲಿ ಸೀನಿಯರ್ ವಿದ್ಯಾರ್ಥಿಗಳು ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಹಲ್ಲೆ ಮಾಡಿದ ಎಂಟು ವಿದ್ಯಾರ್ಥಿಗಳಾದ ಉಳ್ಳಾಲದ ಮೊಹಮ್ಮದ್ ಅಫ್ರಿಸ್ (21), ಪಾಂಡೇಶ್ವರದ ಸುನೈಫ್ವ( 21), ಕೇರಳದ ಕಾಸರಗೋಡು ವಿನ ಶೇಖ್ ಮೊಹಿದ್ದೀನ್ (20), ಮಂಗಳೂರಿನ ಕೋಟೆಕಾರ್ನ ಇಬ್ರಾಹಿಂ ರಾಜಿ (20), ಗುರುಪುರದ ಮೊಹಮ್ಮದ್ ಸಿನಾನ್ ಅಬ್ದುಲ್ಲಾ ( 21), ಕೋಟೆಕಾರ್ ನ ಮೊಹಮ್ಮದ್ ಅಶಾಮ್ (21), ಬಂದರುನ ಮೊಹಮ್ಮದ್ ಅಫಾಮ್ ಅಸ್ಲಾಮ್ (20) ಗುರುಪುರದ ಮೊಹಮ್ಮದ್ ಸೈಯದ್ ಅಫ್ರೀದ್ (21) ರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಯೆನೆಪೋಯ ಡಿಗ್ರಿ ಕಾಲೇಜಿನಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ.
ಘಟನೆ ವಿವರ: ಮೇ 28 ರಂದು ದೇರಳಕಟ್ಟೆಯ ಯೆನೆಪೋಯ ಕಾಲೇಜಿನಲ್ಲಿ ನಡೆದ ಕಲ್ಚರಲ್ ಕಾರ್ಯಕ್ರಮದಲ್ಲಿ ಮೈಗೆ ಕೈ ತಾಗಿದ ಆರೋಪದಲ್ಲಿ ಸೀನಿಯರ್ ವಿದ್ಯಾರ್ಥಿಗಳು ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ಅದಾದ ಬಳಿಕ ಮೊದಲ ವರ್ಷದ ವಿದ್ಯಾರ್ಥಿ ಕೇರಳದ ಕುಟ್ಟಿಪುರಂ ನ ಶಬಾಬ್ ಕೆ ತನ್ನ ಸಹಪಾಠಿ ಶಿಬಿಲ್ ಜೊತೆಗೆ ನಗರದ ಚಿಲಿಂಬಿಯ ಫ್ಲ್ಯಾಟ್ ನಲ್ಲಿರುವ ವೇಳೆ ಆರೋಪಿಗಳು ಎಂಟು ಮಂದಿ ಮಾರಕ ಆಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದರು ಎನ್ನಲಾಗ್ತಿದೆ.
ಅಫ್ರೀಸ್ ಎಂಬಾತ ಇವರಿಗೆ ಬೈಯ್ದು ಜೀವ ಬೆದರಿಕೆ ಹಾಕಿದ್ದನು. ಮೊಹಿದ್ದೀನ್ ಎಂಬಾತ ಕ್ರಿಕೆಟ್ ಬ್ಯಾಟ್ ನಿಂದ ಶಬಾಬ್ ಗೆ ಹೊಡೆಯಲು ಹೋದಾಗ ಶಿಬಿಲ್ ಆತನನ್ನು ಪಕ್ಕಕ್ಕೆ ಎಳೆದು ರಕ್ಷಿಸಿದ್ದನು. ಇನ್ನುಳಿದವರು ಹೊಡೆಯಿರಿ ಹೊಡೆಯಿರಿ ಎಂದು ಹೇಳಿ ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಓದಿ: ಬ್ಯಾಂಕಿಂಗ್ ವಹಿವಾಟಿನಲ್ಲಿ ತೊಂದರೆ : ಪೆಟ್ರೋಲ್ ಬಂಕ್ ಮಾಲೀಕರಿಂದ ಮೇ 31ರಂದು ಪ್ರತಿಭಟನೆ