ಬೆಳ್ತಂಗಡಿ: ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟಿದೆ. ಹಿಂದೆ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆ ಇಂದು ಗ್ರಾಮಾಂತರ ಪ್ರದೇಶಕ್ಕೂ ತಲುಪಿದೆ. ಹಾಗಂತ ಸೂಕ್ಷ್ಮ ಗ್ರಾಮೀಣ ಪ್ರದೇಶಗಳು ಕೂಡಾ ತಂತ್ರಜ್ಞಾನದ ಮಡಿಲಲ್ಲೇ ಇವೆ ಅಂದ್ರೆ ತಪ್ಪಾಗುತ್ತದೆ. ದೇಶದ ಹಲವೆಡೆ ಇಂಟರ್ನೆಟ್ ಅಥವಾ ನೆಟ್ವರ್ಕ್ ಗಗನ ಕುಸುಮವಾಗಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳ ನಿತ್ಯದ ಸಮಸ್ಯೆ. ತಾಲೂಕಿನ ಶಿಬಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ, ಪೊಸೋಡಿ, ಮಾರ್ಯಾಡಿ, ಬಂಗೇರಡ್ಕ, ಪತ್ತಿಮಾರು, ನೀರಾಣ, ಭಂಡಿಹೊಳೆ, ಬೂಡುದಮಕ್ಕಿ ಪರಿಸರದ ಸುಮಾರು 500 ಕುಟುಂಬಗಳು ಕಳೆದ 12 ವರ್ಷಗಳಿಂದ ಮೊಬೈಲ್ ನೆಟ್ವರ್ಕ್ಗಾಗಿ ಇನ್ನಿಲ್ಲದ ಹರಸಾಹಸ ಮಾಡುತ್ತಿವೆ. ಈ ಬಗ್ಗೆ ಅದೆಷ್ಟೋ ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದರೂ, ಫಲಿತಾಂಶ ಮಾತ್ರ ಶೂನ್ಯವಾಗಿದೆ.
ಟವರ್ ಇಲ್ಲ... ನೆಟ್ವರ್ಕ್ ಇಲ್ಲವೇ ಇಲ್ಲ...
ಇಲ್ಲಿನ ಜನ ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಇಲ್ಲಿನ ಶಿಬಾಜೆ ಗ್ರಾಮದ ಕೆಲ ಪ್ರದೇಶಗಳೇ ಸಾಕ್ಷಿ. ಇಲ್ಲಿ ಯಾವುದೇ ಕಂಪನಿಗಳ ಟವರ್‌ಗಳಿಲ್ಲ. ಬೇರೆ ಪ್ರದೇಶಗಳ ಯಾವುದೇ ಟವರ್‌ಗಳ ನೆಟ್‌ವರ್ಕ್ ಕೂಡಾ ಇಲ್ಲಿ ಸಿಗುವುದಿಲ್ಲ. ಹೀಗಾಗಿ ಈ ಪರಿಸರದ ಜನ ಪ್ರಪಂಚದ ಆಗುಹೋಗುಗಳಿಂದ ದೂರವೇ ಉಳಿದಿದ್ದಾರೆ.
ನೆಟ್ವರ್ಕ್ ಸಮಸ್ಯೆಯಿಂದಾಗಿ ಮಕ್ಕಳು-ಅಧ್ಯಾಪಕರು ಕಂಗಾಲು!
ಕೊರೊನಾ ಮಹಾಮಾರಿಯ ರುದ್ರ ನರ್ತನದಿಂದಾಗಿ ಸದ್ಯ ಮಕ್ಕಳ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಆನ್‌ಲೈನ್ ಶಿಕ್ಷಣದ ಪರಿಚಯವಾಗಿದೆ. ಈಗಂತೂ ಈ ಭಾಗದ ಶಾಲಾ ಮಕ್ಕಳ ಪಾಡು ಕೇಳೋರಿಲ್ಲ. ಮಕ್ಕಳಿಗೆ ಆನ್‌ಲೈನ್ ಕ್ಲಾಸ್ಗಳು ಪ್ರಾರಂಭವಾಗಿದ್ದರಿಂದ ಈ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಿಗದೆ, ಈ ಪರಿಸರದ ಸುಮಾರು 400 ಮಕ್ಕಳು ಹಾಗೂ ಅಧ್ಯಾಪಕರಿಗೆ ದಿಕ್ಕು ತೋಚದಂತಾಗಿದೆ. ಆನ್‌ಲೈನ್ ಶಿಕ್ಷಣಕ್ಕಾಗಿ ಈ ಪ್ರದೇಶದ ವಿದ್ಯಾರ್ಥಿಗಳು ನೆಟ್‌ವರ್ಕ್ ಸಿಗುವ ಪ್ರದೇಶವನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಬೇಸಿಗೆ ಕಾಲದಲ್ಲಿ ಬೆಟ್ಟ, ಗುಡ್ಡ ಅಥವಾ ಮರವನ್ನಾದರು ಏರಿ ಪಾಠವನ್ನು ಕೇಳಬಹುದು. ಆದರೆ ಮಳೆಗಾಲದಲ್ಲಿ ಇದು ಸಾಧ್ಯವೇ ಎಂಬುದು ಮಕ್ಕಳ ಚಿಂತೆ.
ನೆಟ್ವರ್ಕ್ ಅರಸಿ ಗುಡ್ಡದ ಮೇಲೆ ಟೆಂಟ್!
ಈ ಪ್ರದೇಶದ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗಾಗಿ ದಿನವಿಡೀ ಪರದಾಡುತ್ತಿದ್ದಾರೆ. ಕೆಲ ಮಕ್ಕಳು ನೆಟ್‌ವರ್ಕ್ ಸಿಗುವ ಬಸ್‌ಸ್ಟಾಂಡ್, ದೇವಸ್ಥಾನದ ವಠಾರ, ಹತ್ತಿರದ ಮನೆಗಳನ್ನು ಆಶ್ರಯಿಸಿದ್ದಾರೆ. ಆದರೆ ಎಲ್ಲಾ ಮಕ್ಕಳು ಒಂದೇ ಕಡೆ ಸೇರಿದಾಗ ಅಲ್ಲೂ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಅದಕ್ಕಾಗಿ ಈ ಪರಿಸರದ ಕೆಲ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇನ್ನೂ ಕೆಲ ವ್ಯಕ್ತಿಗಳು ಸೇರಿ ಪೇಟೆಯಿಂದ 5 ಕಿ.ಮೀ. ದೂರದ ಪೆರ್ಲದ ಎತ್ತರ ಪ್ರದೇಶದ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ. ಸೊಳ್ಳೆಗಳ ಕಾಟ ತಪ್ಪಿಸಲು ಟೆಂಟ್ ಸುತ್ತ ಬಟ್ಟೆಯನ್ನು ಸುತ್ತಿ, ಸೊಳ್ಳೆಬತ್ತಿ ಉರಿಸುತ್ತಾರೆ. ಬಳಿಕ ಇದರೊಳಗೆ ಕುಳಿತುಕೊಂಡು ಆನ್‌ಲೈನ್ ಪಾಠವನ್ನು ಕೇಳುತ್ತಿದ್ದಾರೆ.
ಮಕ್ಕಳೊಂದಿಗೆ ಶಿಕ್ಷಕಿ ಸೌಂದರ್ಯ ಕೈರಂಡ ಕೂಡಾ ಇದೇ ಟೆಂಟ್‌ನಲ್ಲಿ ಕುಳಿತು ಆನ್‌ಲೈನ್ ತರಗತಿಗಾಗಿ ತಯಾರಿ ನಡೆಸುತ್ತಿದ್ದಾರೆ. ಎತ್ತರದ ಗುಡ್ಡವಾದ್ದರಿಂದ ಇಲ್ಲಿಗೆ ಎಲ್ಲಾ ಕಡೆಯ ನೆಟ್‌ವರ್ಕ್ ಸಿಗುತ್ತಿದೆ. ಆದರೆ ಜೋರಾಗಿ ಮಳೆ ಬಂದ್ರೆ ಇಲ್ಲಿಯೂ ಸಮಸ್ಯೆ ತಪ್ಪಿದ್ದಲ್ಲ. ಶಿಬಾಜೆ ಪರಿಸರಕ್ಕೆ ಯಾವುದಾದರೂ ಕಂಪನಿಯ ಟವರ್ ಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಇದಕ್ಕಾಗಿ ಇಲ್ಲಿಯ ನಿವಾಸಿಗಳು, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಕಂಪನಿಯವರು ಈ ಬಗ್ಗೆ ಆಸಕ್ತಿ ತೋರಿಲ್ವಂತೆ.
ಈ ಕುರಿತು ಮಾತನಾಡಿದ ಸ್ಥಳೀಯರೊಬ್ಬರು, ನಮ್ಮ ಸಮಸ್ಯೆಯನ್ನು ನಿವಾರಿಸಿ ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ ಎಂದು 'ಈಟಿವಿ ಭಾರತ' ಮೂಲಕ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.
ಕಳೆದ 12 ವರ್ಷಗಳಿಂದ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಜನನಾಯಕರಿಗೆ ಮನವಿ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಖಾಸಗಿ ಕಂಪನಿಯವರು ಭಂಡಿಹೊಳೆಯಲ್ಲಿ ಟವರ್ ಹಾಕುತ್ತೇವೆ ಎಂದು ಕಳೆದ ಎರಡು ವರುಷಗಳಿಂದ ಹೇಳುತ್ತಾ ಬಂದಿದ್ದರೂ, ಈವರೆಗೂ ಹಾಕಿಲ್ಲ. ಇದೀಗ ನೆಟ್ವರ್ಕ್ಗಾಗಿ ಇಲ್ಲಿನ ಮಕ್ಕಳು ಕಾಡುಮೇಡು ಅಲೆದಾಡುವಂತಾಗಿದೆ. ಹೀಗಾಗಿ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ನಮ್ಮ ಪರಿಸರದ ಎಲ್ಲ ಮನೆಯವರು ಸೇರಿ ಉಗ್ರ ಹೋರಾಟವನ್ನೂ ಮಾಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ರವಾನಿಸಿದ್ದಾರೆ.