ಬೆಳ್ತಂಗಡಿ: ಕೋವಿಡ್ ಲಾಕ್ಡೌನ್ ನಿಂದ ಕೆಲವು ಕಾಲೇಜುಗಳು ಆನ್‌ಲೈನ್ ಮೂಲಕ ಪಾಠ ಪ್ರಾರಂಭಿಸಿವೆ. ಆದರೆ, ಕೆಲವು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್‌ವರ್ಕ್ ಬಹುದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಇಲ್ಲೊಬ್ಬ ವಿದ್ಯಾರ್ಥಿ ಏನೇ ಆದರೂ ತರಗತಿಗಳನ್ನು ಮಾತ್ರ ತಪ್ಪಿಸಬಾರದೆಂದು ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಗಾಗಿ ಮರವೇರಿ ಕುಳಿತಿದ್ದಾನೆ.
ಶಿರಸಿ ಮೂಲದ ಶ್ರೀರಾಮ್ ಹೆಗಡೆ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಸದ್ಯ ಲಾಕ್ಡೌನ್ ನಿಂದ ತನ್ನ ಹುಟ್ಟೂರು ಶಿರಸಿಗೆ ಹೋಗಿದ್ದಾನೆ. ನಂತರ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸುವ ಬಗ್ಗೆ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆ ಕ್ಲಾಸ್ ಗಾಗಿ ಎಲ್ಲಾ ವಿದ್ಯಾರ್ಥಿಗಳು ತಯಾರಿ ಮಾಡಿಕೊಂಡಿದ್ದರು. ಆದರೆ, ಶ್ರೀರಾಮ್ ಹುಟ್ಟೂರು ಶಿರಸಿಯ ಭಟ್ಕಳದಲ್ಲಿ ಇಂಟರ್‌ನೆಟ್ ಸಮಸ್ಯೆ ಇದ್ದುದರಿಂದ ತರಗತಿಯಲ್ಲಿ ಭಾಗಿಯಾಗುವುದಕ್ಕೆ ತೊಂದರೆಯಾಗುತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿ ಶ್ರೀರಾಮ್ ಹೊಸದೊಂದು ಐಡಿಯಾ ಮಾಡಿದ್ದಾರೆ.
ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನೆಟ್‌ವರ್ಕ್ ಹುಡುಕಿಕೊಂಡ ಹೋದ ಆತನಿಗೆ ಎಲ್ಲೂ ಸರಿಯಾಗಿ ನೆಟ್‌ವರ್ಕ್ ಸಿಕ್ಕಿಲ್ಲ. ಬೇಸತ್ತು ಮರವೊಂದರ ಮೇಲೇರಿ ಕುಳಿತ ಶಿವರಾಮ್ಗೆ ಸ್ಪಷ್ಟವಾಗಿ ಸಿಗ್ನಲ್ ದೊರಕಿದೆ. ಹೀಗಾಗಿ ಅಲ್ಲೇ ಕುಳಿತು ಅನ್ಲೈನ್ ಕ್ಲಾಸ್ ಮುಗಿಸುತ್ತಿದ್ದ. ಇವನ ಈ ಪ್ರಯತ್ನಕ್ಕೆ ಇದೀಗ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.