ಬಂಟ್ವಾಳ (ದಕ್ಷಿಣ ಕನ್ನಡ) : ತೀರಾ ಗ್ರಾಮೀಣ ಭಾಗವಾದ ಕಡೇಶಿವಾಲಯದ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಯಶವಂತ ಎಂಬ ವಿದ್ಯಾರ್ಥಿ ತಯಾರಿಸಿದ ಒಂದು ಕೃಷಿ ಯಂತ್ರ ಇದೀಗ ರಾಜ್ಯ ಮಟ್ಟದಿಂದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಸರಕಾರಿ ಶಾಲೆಯ ವಿದ್ಯಾರ್ಥಿಯ ಈ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ವಿದ್ಯಾರ್ಥಿಯ ಬಹುಪಯೋಗಿ ಕೃಷಿ ಯಂತ್ರದ ಅನ್ವೇಷಣೆಯು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡದ ರಾಯಪುರದಲ್ಲಿ ನಡೆಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಬಹುಮಾನ ಪಡೆದುಕೊಂಡಿತ್ತು.
ಇದೀಗ ಕೇರಳದ ತ್ರಿಶೂರ್ನಲ್ಲಿ ಜನವರಿ 27ರಿಂದ 31ರವರೆಗೆ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ರಾಜ್ಯದಿಂದ ದಕ್ಷಿಣ ಭಾರತ ಮಟ್ಟಕ್ಕೆ ಒಟ್ಟು 20 ಮಾದರಿಗಳು ಆಯ್ಕೆಯಾಗಿವೆ. ವೈಯಕ್ತಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ವಿದ್ಯಾರ್ಥಿಯ ಮಾದರಿಗೆ ಮಾತ್ರ ಸ್ಥಾನ ಸಿಕ್ಕಿದೆ.
ಕಡೇಶ್ವಾಲ್ಯ ಕೆಮ್ಮಾನು ನಿವಾಸಿ ಲೋಕೇಶ-ಪವಿತ್ರ ದಂಪತಿಯ ಪುತ್ರ ಯಶವಂತನಿಗೆ ಶಾಲೆಯ ಗಣಿತ ಶಿಕ್ಷಕಿ ಗೀತಾಕುಮಾರಿ ಮಾರ್ಗದರ್ಶನ ನೀಡಿದ್ದರು. ಈ ವಿದ್ಯಾರ್ಥಿಯ ಮಾದರಿಯು ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ರಾಜ್ಯಮಟ್ಟದಲ್ಲೂ ಈ ಕೃಷಿ ಯಂತ್ರ ಬಹುಮಾನ ಪಡೆದು, ಈಗ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವಕಾಶ ಪಡೆದಿದೆ.
'ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆ ಆಗಿದ್ದು ತುಂಬಾ ಹೆಮ್ಮೆ ಎನಿಸುತ್ತದೆ. ನಮ್ಮ ಶಾಲಾ ಶಿಕ್ಷಕರಿಗೆ, ಅಪ್ಪ, ಅಮ್ಮನಿಗೆ ಈ ಸಾಧನೆ ಖುಷಿ ಕೊಟ್ಟಿದೆ. ಧಾರವಾಡದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತುಂಬಾ ವಿಷಯಗಳನ್ನು ಕಲಿತಿದ್ದೇನೆ. ನನ್ನ ಈ ಯಂತ್ರವು ಬಹುಪಯೋಗಿ ಕೃಷಿ ಯಂತ್ರವಾಗಿದೆ. ಹಾವು ಬರದ ಹಾಗೆ ವ್ಯವಸ್ಥೆಯೂ ಇದೆ. ಸೈಕಲ್ ಜೋಡಣೆ ಮಾಡಿ ಇದನ್ನು ಸರಳವಾಗಿ ಬೇರೆ ಸ್ಥಳಗಳಲ್ಲಿ ಕೊಂಡೊಯ್ಯಬಹುದು. ಇಳಿಜಾರು ಪ್ರದೇಶದಲ್ಲಿ ಹೊಲ ಇದ್ದರೆ, ರೈತರಿಗೆ ಕೆಲಸ ಮಾಡಲು ಕಷ್ಟ. ಹೀಗಾಗಿ ಯಂತ್ರದಲ್ಲಿ ಅಳವಡಿಸಲಾದ ಮೋಟರ್ನಿಂದ ಕಾರ್ಯ ಸುಲಭವಾಗುತ್ತದೆ. ಬಹುಪಯೋಗಿ ಕೃಷಿ ಯಂತ್ರದಲ್ಲಿ ಉಳುಮೆ ಮಾಡಲು ವ್ಯವಸ್ಥೆ, ಫಸಲು ಕಟಾವು ವ್ಯವಸ್ಥೆಯೂ ಇದೆ' ಎಂದು ತನ್ನ ಯಂತ್ರದ ಕುರಿತು ಯಶವಂತ ಮಾಹಿತಿ ನೀಡಿದರು.
ಸರಕಾರಿ ಪ್ರೌಢಶಾಲೆ ಕಡೇಶಿವಾಲಯದ ಗಣಿತ ಶಿಕ್ಷಕಿ ಗೀತಾ ಕುಮಾರಿ ಮಾತನಾಡಿ, 'ದಕ್ಷಿಣ ಭಾರತದ ಝೋನಲ್ ಲೆವೆಲ್ಗೆ ಯಶವಂತ ಆಯ್ಕೆಯಾಗಿರುವುದು ಸಂತಸ ಮೂಡಿಸಿದೆ. ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಮಾಡೆಲ್ ತಯಾರಿ ಕುರಿತು ವಿದ್ಯಾರ್ಥಿಗಳಿಗೆ ನಾನು ಹೇಳಿದಾಗ, ಯಶವಂತ ಈ ಮಾಡೆಲ್ ಮಾಡಿದ್ದೇನೆ ಎಂದು ಹೇಳಿದ. ಕೃಷಿಕರ ಮನೆಯ ಸದಸ್ಯರೇ ಕೃಷಿ ಕೆಲಸವನ್ನು ಮಾಡಿಕೊಂಡು ಮುನ್ನಡೆಯಲು ಸಹಕಾರಿಯಾಗಲು ಬಹುಪಯೋಗಿ ಕೃಷಿ ಯಂತ್ರವನ್ನು ಯಶವಂತ ತಯಾರಿ ಮಾಡಿದ್ದಾನೆ' ಎಂದರು.
ಯಂತ್ರದ ಉಪಯೋಗವೇನು?: 'ಈ ಯಂತ್ರದಲ್ಲಿ 20ಕ್ಕಿಂತಲೂ ಹೆಚ್ಚು ಉಪಯೋಗಗಳಿವೆ. ಈಗಾಗಲೇ ಕೃಷಿ ಕೆಲಸ ಮಾಡಲು ಯಂತ್ರಗಳು ಚಾಲ್ತಿಯಲ್ಲಿದ್ದರೂ ಒಂದೊಂದು ಯಂತ್ರ ಒಂದೊಂದು ಕೆಲಸ ಮಾಡುತ್ತವೆ. ಆದರೆ, ಯಶವಂತನ ಈ ಯಂತ್ರವೊಂದರಲ್ಲೇ ಎಲ್ಲ ಕೆಲಸಗಳೂ ಆಗುತ್ತವೆ. ಯಶವಂತನ ಮಾದರಿ ತಯಾರಿಗೆ ತಂದೆ, ತಾಯಿ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ. ನನ್ನ ಸೇವಾವಧಿಯಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಕರೆದುಕೊಂಡು ಹೋಗಿರುವುದು ಇದೇ ಪ್ರಥಮ. ಅಲ್ಲಿ ಆಯ್ಕೆಯಾದ 20 ಮಾದರಿಗಳಲ್ಲಿ ಯಶವಂತನ ಮಾಡೆಲ್ ಆಯ್ಕೆಯಾದದ್ದು ಸಾಕಷ್ಚು ಖುಷಿ ನೀಡಿದೆ' ಎಂದು ಶಿಕ್ಷಕಿ ಹೇಳಿದರು.
ಇದನ್ನೂ ಓದಿ: ಟ್ರೀ ಬೈಕ್ ಯಶಸ್ಸಿನ ಬಳಿಕ ತೆಂಗಿನ ಮರ ಹತ್ತುವ ಯಂತ್ರ ಅಭಿವೃದ್ಧಿಪಡಿಸಿದ ಗಣಪತಿ ಭಟ್