ಉಳ್ಳಾಲ (ದಕ್ಷಿಣ ಕನ್ನಡ): "ಉಳ್ಳಾಲ ತಾಲೂಕಿನಾದ್ಯಂತ ಯೋಜನೆಗಳ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ 94 ಸಿ ಭೂಮಿಯಲ್ಲಿದ್ದವರ ಮೂರು ತಲೆಮಾರುಗಳು ಹೆಚ್ಚಾಗಿದ್ದು, ಅವರು ಗೊತ್ತಿಲ್ಲದೆ ಮನೆಗಳನ್ನು ಕಟ್ಟಿರುವ ಸಾಧ್ಯತೆಗಳಿವೆ. ಆದ್ದರಿಂದ ಸರ್ಕಾರ ನೀಡಿರುವ ಭೂಮಿಯಲ್ಲಿ ಉಪಯೋಗ ಹಾಗೂ ದುರುಪಯೋಗದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸುವ ಸಭೆಯಲ್ಲಿ ಪರಿಶೀಲನೆಗೆ ಆಗ್ರಹಿಸುತ್ತೇನೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸೋಮೇಶ್ವರ ಬಟ್ಟಂಪಾಡಿಯ ಕಡಲ್ಕೊರೆತಕ್ಕೀಡಾದ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಸೋಮೇಶ್ವರ ಪುರಸಭೆಯ ಕಂದಾಯ ಕಚೇರಿಗೆ ಭೇಟಿ ಕೊಟ್ಟು ಐಆರ್, ಎಂಆರ್ ಹಾಗೂ ಜಮಾಬಂದಿ ಕಡತಗಳ ಮಾಹಿತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದರು.
ಬಳಿಕ ಮಾತನಾಡಿ, "ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 94 ಸಿ ಹಕ್ಕಿನಡಿ 2.5 ಸೆಂಟ್ಸ್ ಭೂಮಿಯನ್ನು ನಿವೇಶನರಹಿತರಿಗೆ ನೀಡಲಾಗಿದೆ. ದುರುಪಯೋಗ ಮಾಡಲು ಜಿಲ್ಲಾಡಳಿತ ಅವಕಾಶ ನೀಡುವುದಿಲ್ಲ" ಎಂದರು. "ಈ ಕುರಿತು ಜಿಲ್ಲಾಡಳಿತದೊಂದಿಗೆ ಇಂದಿನ ಸಭೆಯಲ್ಲಿ ಆಗ್ರಹಿಸಲಾಗುವುದು. ಜಾಗ ಕೊಟ್ಟ ನಂತರ ಹಲವರ ತಲೆಮಾರುಗಳು ಹೆಚ್ಚಾಗಿರುವುದರಿಂದ, ಸಮೀಪದಲ್ಲೇ ಭೂಮಿಯನ್ನು ಕಬಳಿಸಿರುವುದು ರಾಜ್ಯಾದ್ಯಂತ ಹಲವೆಡೆ ನಡೆದಿದೆ. ಅವರನ್ನು ಗಣನೆಗೆ ತೆಗೆದುಕೊಂಡು ಕಾನೂನು ವ್ಯಾಪ್ತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ. ಒಂದು ಸರ್ವೆ ನಂಬರಿನಡಿ ಹಲವರ ಜಾಗದ ದಾಖಲೆಗಳಿವೆ. ಜಾಗದ ಮಾಲೀಕರಿಗೆ ಅವರದ್ದೇ ಆದ ಸರ್ವೆ ನಂಬರ್ ಸಿಗುತ್ತಿಲ್ಲ. ಇದರಿಂದ ಹಲವರಿಗೆ ಕೃಷಿ ಸಾಲ ಪಡೆಯುವುದಾಗಲಿ, ಮನೆ ಕಟ್ಟಲು ಸಾಲವನ್ನು ಪಡೆಯಲು ಕಷ್ಟಗಳಾಗುತ್ತಿದೆ" ಎಂದು ತಿಳಿಸಿದರು.
"ಜಂಟಿ ಖಾತೆಯಲ್ಲಿ ಕುರಿತು ಸಮಸ್ಯೆಗಳನ್ನು ಎದುರಿಸುತ್ತಿರುವ ಮನೆಮಂದಿಗೆ ಸರ್ಕಾರವೇ ನೇರ ಮನೆಬಾಗಿಲಿಗೆ ತೆರಳಿ ಪೋಡಿ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಡೆಸುವ ಆಲೋಚನೆ ಮಾಡಲಾಗಿದೆ. ಈ ಕುರಿತು ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು. ಬಡವರಿಗೆ ಸಮಸ್ಯೆಗಳ ಪರಿಹಾರ ಆಗಬೇಕು ಅನ್ನುವ ದೃಷ್ಠಿಯಿಂದ ಅಭಿಯಾನ ರೂಪದಲ್ಲಿ ಕಾರ್ಯಕ್ರಮವನ್ನು ಕಂದಾಯ ಇಲಾಖೆಯಿಂದ ಮಾಡಲಾಗುವುದು" ಎಂದು ಹೇಳಿದರು.
"ಕಂದಾಯ ಕಚೇರಿಗಳಲ್ಲಿ ಹಲವು ವರ್ಷಗಳಿಂದ ಹಳೇಯ ದಾಖಲೆಗಳು ಉಳಿದಿದೆ. ಹಳೆಯ ದಾಖಲೆಗಳನ್ನು ಪಡೆಯಲು ಜನರಿಂದ ಹಣ ಪಡೆಯುವ ಕೆಲಸಗಳಾಗುತ್ತಿದೆ. ಇಂತಹ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಹಳೆಯ ದಾಖಲಾತಿಗಳು ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸಗಳಾಗುತ್ತಿದೆ. ಆದ್ದರಿಂದ ಆಡಳಿತ ಸರಳೀಕರಣಗೊಳಿಸುವ ಉದ್ದೇಶದಿಂದ ಹಳೇಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಂಡೆಕ್ಸ್ ಮಾಡಿ ಡಿಜಿಟಲೀಕರಣಗೊಳಿಸುವ ಆಲೋಚನೆಯನ್ನು ಇಲಾಖೆಯಿಂದ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ತಾಲೂಕು ಕಚೇರಿಗೆ ಭೇಟಿ: ನಾಟೆಕಲ್ನಲ್ಲಿರುವ ಉಳ್ಳಾಲ ತಾಲೂಕು ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ಸಿಬ್ಬಂದಿ ಕೊರತೆಯಿಂದ ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿರುವುದನ್ನು ತಿಳಿಸಲಾಯಿತು. ಈ ಕುರಿತು ತಕ್ಷಣ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ ಸಚಿವರು, "ಜಾಗದ ನೋಂದಣಿ ಕಚೇರಿಯನ್ನು ಉಳ್ಳಾಲ ತಾಲೂಕಿಗೆ ತರುವ ಪ್ರಯತ್ನವನ್ನು ಮಾಡುತ್ತೇನೆ. ಸಭೆಯಲ್ಲಿ ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ" ಎಂದು ಹೇಳಿದರು.
ನಿಯೋಗದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ವಿಧಾನ ಪರಿತ್ ಸದಸ್ಯ ಹರೀಶ್ ಕುಮಾರ್, ರಾಜೀವ ಗಾಂಧಿ ವಿವಿಗಳ ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್ ಆಲಿ, ತಾಲೂಕು ತಹಶೀಲ್ದಾರ್ ಎ.ಪುಟ್ಟರಾಜು, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಗ್ರಾಮ ಲೆಕ್ಕಾಧಿಕಾರಿ ಲಾವಣ್ಯ ಇದ್ದರು.
ಇದನ್ನೂ ಓದಿ: ಮಂಗಳೂರು: ಸಂಚರಿಸುತ್ತಿದ್ದ ಬಸ್ನಿಂದ ಹೊರಗೆಸೆಯಲ್ಪಟ್ಟು ಕಂಡಕ್ಟರ್ ಸಾವು- ಘಟನೆಯ ವಿಡಿಯೋ