ಮಂಗಳೂರು : ಸಹಕಾರಿ ಬ್ಯಾಂಕ್ಗಳಲ್ಲಿ ನಗ-ನಗದು ಇಡುವವರಿಗೆ ಮೋಸವಾಗದಂತೆ ಕ್ರಮ ವಹಿಸಲಾಗುತ್ತದೆ. ಜೊತೆಗೆ ಯಾವುದೇ ದಾಖಲೆಗಳಿಲ್ಲದೆ ಸಾಲ ನೀಡುವ ಬ್ಯಾಂಕ್ಗಳ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಮಂಗಳೂರಿನ ಟಿ ವಿ ರಮಣ ಪೈ ಸಭಾಂಗಣದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಕೋ ಆಪರೇಟಿವ್ ಬ್ಯಾಂಕ್ನಲ್ಲಿ ನಡೆದ ಮೋಸಕ್ಕೆ ಎಲ್ಲಾ ಸಹಕಾರಿ ಬ್ಯಾಂಕ್ಗಳನ್ನು ಹೊಣೆ ಮಾಡಲಾಗುವುದಿಲ್ಲ. ಮೋಸ ನಡೆದಿರುವ ಬ್ಯಾಂಕುಗಳ ಸಂಬಂಧಪಟ್ಟವರನ್ನು ಯಾವುದೇ ಮುಲಾಜಿಲ್ಲದೆ ಜೈಲಿಗಟ್ಟಲಾಗುವುದು ಎಂದು ಹೇಳಿದರು.
ಕರ್ನಾಟಕದಲ್ಲಿ 280 ಸಹಕಾರಿ ಬ್ಯಾಂಕುಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಲ ನೀಡುವಲ್ಲಿಯೂ, ವಸೂಲಾತಿಯಲ್ಲಿಯೂ ನಂಬರ್-1 ಸ್ಥಾನದಲ್ಲಿವೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಮೀಸಲಿಟ್ಟ ಅನುದಾನದಲ್ಲಿ ಸಹಕಾರಿ ಕ್ಷೇತ್ರಕ್ಕೆ 600 ಕೋಟಿ ರೂ. ಒದಗಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಈ ರೀತಿ ಪ್ರಸ್ತಾವ ಸಲ್ಲಿಸಿರುವ ಮೊದಲ ರಾಜ್ಯ ಕರ್ನಾಟಕ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.
ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು, ಶತಮಾನಗಳನ್ನು ಕಂಡಿರುವ ಹತ್ತಾರು ಸಹಕಾರಿ ಬ್ಯಾಂಕುಗಳಿರುವ ಜಿಲ್ಲೆ ದ.ಕ ಜಿಲ್ಲೆ ಆದ್ದರಿಂದ ದ.ಕ ಜಿಲ್ಲೆಯನ್ನು ಸಹಕಾರಿ ಬ್ಯಾಂಕುಗಳ ಕಾಶಿಯಾಗಿದೆ. ಸಹಕಾರಿ ರಂಗ ಅದ್ಭುತ ಕೊಡುಗೆಗಳನ್ನು ಈ ಜಿಲ್ಲೆಗೆ ನೀಡಿದೆ ಎಂದು ಹೇಳಿದರು.
ಈ ಬಾರಿ ಮೂವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗಿದೆ. ಹಿಂದೆ ಸಹಕಾರಿ ರತ್ನ, ಭಾರತ ರತ್ನ, ಪದ್ಮವಿಭೂಷಣ ಮುಂತಾದ ಪ್ರಶಸ್ತಿಗಳು ಶಿಫಾರಸು ಮೇರೆಗೆ ದೊರಕುತ್ತಿತ್ತು. ಈ ಬಾರಿ ಯಾರೆಲ್ಲಾ ಈ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೋ, ಅದು ಶಿಫಾರಸ್ಸಿನಿಂದ ಆಗಿರೋದಲ್ಲ. ಇದು ಅವರ ಸಾಧನೆಯಿಂದ ಸಾಧಿಸಿದ್ದು ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತವನ್ನು ಘೋಷಣೆ ಮಾಡಿದರು. ಇದರಲ್ಲಿ ಉದ್ಯಮಶೀಲತೆಗೆ ಆದ್ಯತೆ, ಕೃಷಿರಂಗಕ್ಕೆ ಸಹಕಾರ, ಉದ್ಯೋಗ ಶೀಲತೆ ಬೆಳೆಸುವಿಕೆ ಈ ಮೂರಕ್ಕೆ ಆದ್ಯತೆ ನೀಡಲಾಗಿದೆ. ಇಂದು ರಾಜ್ಯದಲ್ಲಿ ಕೃಷಿರಂಗಕದ ಮೂಲಕ ಪರಿವರ್ತನೆ ಮಾಡಿ, ಆತ್ಮನಿರ್ಭರ ಭಾರತದ ಜೊತೆಗೆ ಜೋಡಿಸುವ ಕಾರ್ಯವನ್ನು ಸಹಕಾರಿ ರಂಗ ಮಾಡಿಕೊಂಡಿದೆ.
ಆದ್ದರಿಂದ ಕರ್ನಾಟಕದಲ್ಲಿ ಆತ್ಮನಿರ್ಭರ ಭಾರತ ಯಶಸ್ವಿಯಾಗಿದೆ. ಅಲ್ಲದೆ ಈ ಬಾರಿ ದ.ಕ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ ಯಶಸ್ವಿಯಾಗಲು ಡಿಸಿಸಿ ಬ್ಯಾಂಕ್ ಕಾರಣ ಎಂದು ಹೇಳಿದರು. ಮುಂದಿನ ಮೂರು ವರ್ಷದೊಳಗೆ ದ.ಕ ಜಿಲ್ಲೆಯ ರೈತರ ಬಹಳ ದೊಡ್ಡ ಸಮಸ್ಯೆ ಕುಮ್ಕಿ, ಕಾನ, ಬಾನ ಸಮಸ್ಯೆಗಳನ್ನು ಯಡಿಯೂರಪ್ಪ ಸರ್ಕಾರ ಬಗೆಹರಿಸುತ್ತದೆ. ಮೂಲಗೇಣಿ ಸಮಸ್ಯೆಗಳನ್ನು ಇರಿಸಲಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಮಂಗಳೂರು ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್ ಪಾಲ್ ಎ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.