ಮಂಗಳೂರು: ಕಳೆದ ಎರಡು ತಿಂಗಳಿನಿಂದ ಶಾಲಾ ವಾಹನ ಚಾಲಕರ ಮೇಲೆ ಕಾನೂನಿನ ಕಾರಣ ನೀಡಿ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶವಿದೆ ಎಂದು ಪೊಲೀಸರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಎಂದು ಶಾಲಾ ವಾಹನ ಚಾಲಕರ ಸಂಘದ ಗೌರವ ಸಲಹೆಗಾರ ಸತೀಶ್ ಅಡಪ ತಮ್ಮ ನೋವು ತೋಡಿಕೊಂಡಿದ್ದಾರೆ.
ಶಾಲಾ ವಾಹನ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಎರಡು ದಿನಗಳ ಕಾಳ ನಡೆದ ಮುಷ್ಕರದಲ್ಲಿ ಅವರು ಮಾತನಾಡಿದರು. ನಮ್ಮ ಲೈಸೆನ್ಸ್ ಗಳನ್ನು ನ್ಯಾಯಾಲಯಕ್ಕೆ ನೀಡಲಾಗುತ್ತಿದೆ. ಕಾನೂನು ಎಂದು ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸುವುದನ್ನು ತಡೆಗಟ್ಟಲು ಸರ್ಕಾರ ಮಧ್ಯಪ್ರವೇಶಿಸಬೇಕಾಗಿದೆ ಎಂದು ಮನವಿ ಮಾಡಿದರು .
ಕಾನೂನು ಪರಿಧಿ ಮೀರಿ ಇಂದು ಅದೆಷ್ಟೋ ಪ್ರಕರಣಗಳು ನಡೆಯುತ್ತಲೇ ಇದೆ. ಆದರೆ, ಅದೆಲ್ಲವನ್ನೂ ಬಿಟ್ಟು ಮಕ್ಕಳ ಶಾಲಾ ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಖಂಡನೀಯ ಎಂದರು.
ಶಾಲಾವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ನ್ಯಾಯಾಲಯದ ತೀರ್ಪಿಗೆ ನಾವು ಗೌರವ ನೀಡುತ್ತಿದ್ದೇವೆ. ಖಂಡಿತವಾಗಿಯೂ ಕಾನೂನು ಪಾಲನೆ ಮಾಡುತ್ತೇವೆ. ಆದರೆ, ಅದನ್ನೇ ನೆಪವಾಗಿರಿಸಿ ಬಡಪಾಯಿ ಶಾಲಾ ವಾಹನ ಚಾಲಕರ ಮೇಲೆ ದಾಳಿ ಮಾಡಲಾಗುತ್ತದೆ. ಸುಳ್ಳು ಪ್ರಕರಣ ದಾಖಲು, ಲೈಸೆನ್ಸ್ ರದ್ದು ಮಾಡಲಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ನಮಗೆ ಪರ್ಯಾಯ ಉದ್ಯೋಗ ಕೊಡಬೇಕು ಎಂದರು.