ಉಳ್ಳಾಲ : ಕುಂಪಲ ಆಶ್ರಯ ಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ (17) ನಿಗೂಢ ಸಾವಿಗೂ ಗಾಂಜಾ ವ್ಯಸನಿಗಳಿಗೂ ಸಂಬಂಧವಿದೆ ಎಂದು ಆರೋಪಿಸಿದ್ದ ಮೋಹನ್ ಶೆಟ್ಟಿ ಮನೆ ಮೇಲೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಕಿಟಿಕಿ, ಗಾಜುಗಳನ್ನು ಧ್ವಂಸ ಮಾಡಿದ್ದಾರೆ.
ಘಟನೆ ಸಂಬಂಧ ಉಳ್ಳಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ 11 ಮಂದಿ ಗಾಂಜಾ ಸೇವಿಸಿರುವುದಾಗಿ ವರದಿಯಾಗಿದೆ.
ಮನೆಯಲ್ಲಿ ಮೋಹನ್ ಮತ್ತು ಪತ್ನಿ ಇಬ್ಬರೇ ಇದ್ದ ಸಂದರ್ಭ ರಾತ್ರಿ 12 ಗಂಟೆಯ ಹೊತ್ತಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಪ್ರೇಕ್ಷಾ ಸಾವು ಗಾಂಜಾ ವ್ಯಸನಿಗಳು ನಡೆಸಿದ ಕೃತ್ಯ ಎಂದು ಮೋಹನ್ ಶೆಟ್ಟಿ ಆರೋಪಿಸಿದ್ದರು. ಹೀಗಾಗಿ, ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೋಹನ್ ಶೆಟ್ಟಿ ಮಾತ್ರವಲ್ಲದೆ, ಪ್ರೇಕ್ಷಾ ಮನೆಗೆ ಬಂದಿದ್ದ ಮೂವರು ಯುವಕರ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಅಂಗಡಿ ಮಾಲೀಕರಿಗೂ ಗಾಂಜಾ ಗ್ಯಾಂಗ್ ಜೀವ ಬೆದರಿಕೆಯೊಡ್ಡಿದೆನ ಎಂದು ತಿಳಿದು ಬಂದಿದೆ.
ನನ್ನ ಮೇಲೂ ದಾಳಿಯಾಗಿತ್ತು : ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ
ಈ ಹಿಂದೆ ಗಾಂಜಾ ವ್ಯಸನಿಗಳ ತಂಡ ನನ್ನ ಮೇಲೆಯೂ ಗಂಭೀರವಾಗಿ ದಾಳಿ ನಡೆಸಿತ್ತು. ಆದರೆ, ಎಲ್ಲಿಯೂ ಅದನ್ನು ಪ್ರಚಾರ ಮಾಡಿರಲಿಲ್ಲ. ಈ ಭಾಗದಲ್ಲಿ ಇಂತಹ ದುಷ್ಕೃತ್ಯಗಳು ಮುಂದುವರಿಯುತ್ತಲೇ ಇವೆ. ಆಶ್ರಯಕಾಲನಿ ನಿವಾಸಿಗಳು ಎಲ್ಲರೂ ಒಳ್ಳೆಯವರು. ಹೊರಗಿನಿಂದ ಬರುವ ಬೆರಳೆಣಿಕೆ ಮಂದಿ ಇಲ್ಲಿ ದುಷ್ಕೃತ್ಯ ಎಸಗಿ, ಮನೆಯವರ ಮರ್ಯಾದೆಯನ್ನು ಬಲಿ ಪಡೆದಯುವುದರ ಜೊತೆಗೆ ಊರಿನ ಮರ್ಯಾದೆ ಕೂಡ ಹರಣ ಮಾಡುತ್ತಿದ್ದಾರೆ. ರಾಜಕೀಯ ರಹಿತವಾಗಿ ಎಲ್ಲರೂ ಈ ಗಂಭೀರ ಸಮಸ್ಯೆ ವಿರುದ್ಧ ಹೋರಾಡಬೇಕಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಇದನ್ನೂ ಓದಿ: ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂವರು ಗೆಳೆಯರು ಪೊಲೀಸ್ ವಶಕ್ಕೆ
ಮೃತಳ ಮನೆಗೆ ಸಚಿವ ಅಂಗಾರ ಭೇಟಿ : ವಿದ್ಯಾರ್ಥಿನಿ ಮನೆಗೆ ಶುಕ್ರವಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿದರು. ಪ್ರೇಕ್ಷಾಳ ಹೆತ್ತವರನ್ನು ಸಮಾಧಾನಿಸಿದ ಸಚಿವರು, ಪ್ರಕರಣದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಕಮೀಷನರ್ ಅವರಲ್ಲಿ ಆಗ್ರಹಿಸುತ್ತೇನೆ. ಯಾವ ಗಾಂಜಾದವರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಪ್ರಸ್ತುತ ಕಾನೂನು ಕಠಿಣವಾಗಿರುವುದರಿಂದ ಚಿಂತಿಸದಿರಿ ಎಂದರು.