ಮಂಗಳೂರು: ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹಾಗೂ ಪರಿಸರಾಸಕ್ತರ ವತಿಯಿಂದ ಇಂದು ನಗರದ ತಣ್ಣೀರು ಬಾವಿಯ ಟ್ರೀಪಾರ್ಕ್ನಲ್ಲಿ ರಾಜ್ಯಮಟ್ಟದ ಪರಿಸರ ಸಮ್ಮೇಳನ ನಡೆಯಿತು.
ಪ್ರಕೃತಿ ರೋಧನಕ್ಕೆ ಕಿವಿಯಾಗೋಣ ಎಂಬ ಘೋಷ ವಾಕ್ಯದಡಿ ನಡೆದ ಈ ಪರಿಸರ ಸಮ್ಮೇಳನವನ್ನು ಪದ್ಮಶ್ರೀ ಪುರಸ್ಕ್ರತ ಸುಕ್ರೀ ಬೊಮ್ಮಗೌಡ ಅವರ ತಂಡ ಹಾಲಕ್ಕಿ ಜನಾಂಗದ ಹಾರ್ಲೆ ಕುಣಿತ ಕುಣಿಯುವುದರೊಂದಿಗೆ ಚಾಲನೆ ನೀಡಿದರು. ಬಳಿಕ ಮಂಗಳೂರಿನ ಬಿಇಎಂ ಹೈಸ್ಕೂಲ್ನ ಮಕ್ಕಳು ಪರಿಸರ ನೃತ್ಯವನ್ನು ಪ್ರಸ್ತುತ ಪಡಿಸಿದರು. ಈ ಮೂಲಕ ಮಕ್ಕಳು ಕಣ್ಣಾಮುಚ್ಚಾಲೆ, ಖೋಖೋ, ಲಗೋರಿ, ಕಬಡ್ಡಿ, ಕ್ರಿಕೆಟ್, ಕಲ್ಲಾಟ, ಗೋಲಿಯಾಟ, ರೈಲು ಬಂಡಿ ಮುಂತಾದ ಗ್ರಾಮೀಣ ಆಟಗಳನ್ನು ಆಡುತ್ತಾ ಇಂದು ಕಣ್ಮರೆಯಾಗಿರುವ ಆಟಗಳನ್ನು ಮತ್ತೆ ನೆನಪಿಸಿದರು.
ಚಿತ್ರ ಕಲಾವಿದರ ತಂಡ ಸ್ಥಳದಲ್ಲೇ ಪರಿಸರಕ್ಕೆ ಸಂಬಂಧಿಸಿದ ಚಿತ್ರ ರಚಿಸಿ ಸಮ್ಮೇಳನಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರೀ ಬೊಮ್ಮಗೌಡ, ತುಳಸಿ ಗೌಡ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದು ಪ್ರಸಿದ್ಧರಾದ ಡಿಯಾಗೊ ಬಸ್ತ್ಯಾಂವ್ ಸಿದ್ದಿ , ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶಾನುಭಾಗ್ ಭಾಗವಹಿಸಿದ್ದರು.