ಮಂಗಳೂರು: ಪರಿಸರ ಮಾಲಿನ್ಯ ಎಲ್ಲೆಡೆ ಆವರಿಸಿದೆ. ಮನುಕುಲಕ್ಕೆ ಮಾರಕವಾದ ಪ್ಲಾಸ್ಟಿಕ್ ಭೂತ ಸಾಗರದಾಳದ ಜೀವಿಗಳ ಪ್ರಾಣಕ್ಕೂ ಕುತ್ತುಂಟು ಮಾಡುತ್ತಿದೆ. ಮಂಗಳೂರಿನಲ್ಲಿ ಪತ್ತೆಯಾದ ಮೀನೊಂದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು, ಮಂಗಳೂರಿನ ಫಿಶ್ ಸ್ಟಾಲ್ ಒಂದರಲ್ಲಿ ಸುಮಾರು 10 ಕೆ.ಜಿ ತೂಗುತ್ತಿದ್ದ ಮುರು ಜಾತಿಯ ಮೀನನ್ನು ಕತ್ತರಿಸುವ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ದೊರೆತಿದೆ. ಪ್ಲಾಸ್ಟಿಕ್ ಬ್ಯಾಗ್ ಇರುವುದನ್ನು ಗ್ರಹಿಸಿದ ಫಿಶ್ ಸ್ಟಾಲ್ ಮಾಲೀಕ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮಂಗಳೂರು ಫಿಶರಿಶ್ ಕಾಲೇಜು ಡೀನ್ ಆಗಿರುವ ಎ. ಸೆಂಥಿಲ್ವೆಲ್, ಈ ರೀತಿಯ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಈ ಮೀನನ್ನು ಟ್ರಾಲ್ಬೋಟ್ನಲ್ಲಿ ಹಿಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದರ ಉದರದೊಳಗೆ ಪ್ಲಾಸ್ಟಿಕ್ ಬ್ಯಾಗ್ ಹೋಗಿದೆ. ಪ್ಲಾಸ್ಟಿಕ್ ಹೊಟ್ಟೆಯೊಳಗೆ ಹೋದ ಪರಿಣಾಮ ಅದು ಸಾವನ್ನಪ್ಪಿದೆಯೇ ಹೊರತು, ಈ ಮೀನು ಪ್ಲಾಸ್ಟಿಕ್ ಅನ್ನು ಆಹಾರವಾಗಿ ಸೇವಿಸಿದ್ದರಿಂದ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: 'ಪ್ಲಾಸ್ಟಿಕ್' ಇದು ಬಗೆಹರಿಯಲಾರದ ಸಮಸ್ಯೆಯೇ? ಹಾಗಾದ್ರೆ ಇದರ ನಿವಾರಣೆಗೆ ನಮ್ಮ ಶ್ರಮವೆಷ್ಟು?
ಆದರೂ ಸಮುದ್ರದಲ್ಲಿ ಪ್ಲಾಸ್ಟಿಕ್ ರಾಶಿ ತುಂಬಿಕೊಂಡಿದೆ. ಮೀನು ಹಿಡಿಯಲು ಹೋದ ಮೀನುಗಾರರಿಗೆ ಬಲೆಗಳಲ್ಲಿ ಬಿದ್ದ ಮೀನುಗಳಲ್ಲಿ ಶೇಕಡಾ 40ರಷ್ಟು ಪ್ಲಾಸ್ಟಿಕ್ ದೊರಕುತ್ತಿದೆ. ಈ ಮಾಲಿನ್ಯದಿಂದ ಸಮುದ್ರದೊಳಗಿನ ಜೀವರಾಶಿಗಳಿಗೆ ಬದುಕಲು ಸಾಧ್ಯವಿಲ್ಲ. ಸಮುದ್ರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಲಾಗುವುದು ಸೆಂಥಿಲ್ವೆಲ್ ಮಾಹಿತಿ ನೀಡಿದರು.
ಸಾಧಾರಣವಾಗಿ ದೊಡ್ಡ ದೊಡ್ಡ ಮೀನುಗಳ ಹೊಟ್ಟೆ ಸೇರುವ ಪ್ಲಾಸ್ಟಿಕ್ ಅವುಗಳ ಪ್ರಾಣಕ್ಕೆ ತೊಂದರೆ ತಂದೊಡ್ಡುತ್ತಿದೆ. ಸಮುದ್ರದಲ್ಲಿ ಸ್ವಚ್ಛಂದವಾಗಿ ಜೀವಿಸುವ ಮೀನುಗಳಿಗೂ ಇದೀಗ ಪ್ಲಾಸ್ಟಿಕ್ ಕಂಟಕವಾಗುತ್ತಿದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.