ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಅತ್ತಾವರ ಮೂಲದ ರಾಘವ ಆಚಾರ್ಯ ಸಾವಿಗೀಡಾಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಕೃತ್ಯ ಎಸಗಿದ್ದಾನೆ.
ಗಂಭೀರವಾಗಿ ಗಾಯಗೊಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ, "3.45ರ ಸುಮಾರಿಗೆ ಘಟನೆ ನಡೆದಿದೆ. ಕೇಶವ ಆಚಾರ್ಯ ಎಂಬವರು ಮಂಗಳೂರು ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬ ವ್ಯಕ್ತಿ ಹೊರಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುವೆಲ್ಲರ್ಸ್ ಮಾಲೀಕ ಕೇಶವ ಆಚಾರ್ಯ ಎಂದಿನಂತೆ ಮಧ್ಯಾಹ್ನ ಊಟಕ್ಕೆ ಹೋಗಿದ್ದಾಗ ಅಂಗಡಿಯಲ್ಲಿ ರಾಘವ ಆಚಾರ್ಯ ಒಬ್ಬರೇ ಇದ್ದರು. ಊಟ ಮುಗಿಸಿ 3.45ರ ಸುಮಾರಿಗೆ ಕೇಶವ ಆಚಾರ್ಯ ಮಳಿಗೆಗೆ ಬಂದಾಗ ಅವರ ಕಾರು ನಿಲ್ಲಿಸುವ ಸ್ಥಳದಲ್ಲಿ ಅಡ್ಡಲಾಗಿ ಬೈಕ್ ನಿಲ್ಲಿಸಲಾಗಿತ್ತು. ಸರಿಪಡಿಸಲು ಹೋದಾಗ ಒಳಗಿನಿಂದ ರಾಘವ ಆಚಾರ್ಯ ತನ್ನ ಮೇಲೆ ಹಲ್ಲೆಯಾಗುತ್ತಿದೆ ಎಂದು ಕಿರುಚಿದ ಶಬ್ದ ಕೇಳಿಬಂದಿದೆ."
"ಕೇಶವ ಆಚಾರ್ಯ ಒಳಹೋದಾಗ ಅಲ್ಲಿಂದ ಮುಸುಕು ಹಾಕಿಕೊಂಡ ಒಬ್ಬ ವ್ಯಕ್ತಿ ಹೊರಗೋಡಿ ಬಂದಿದ್ದಾನೆ. ಗಾಯಗೊಂಡಿದ್ದ ರಾಘವ ಆಚಾರ್ಯರನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯz ಮೃತಪಟ್ಟಿದ್ದಾರೆ. ಅಂಗಡಿಯಲ್ಲಿ ಪ್ರದರ್ಶಿಸಲಾಗಿದ್ದ ಕೆಲವೊಂದು ಬಂಗಾರಗಳೂ ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿಯನ್ನು ಪತ್ತೆ ಹಚ್ಚಲಾಗುವುದು. ಆರೋಪಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ್ದ" ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಶವ ಆಚಾರ್ಯ ಮಾತನಾಡಿ, "ಒಂದೂವರೆ ಗಂಟೆಗೆ ಪ್ರತಿದಿನ ನಾನು ಊಟಕ್ಕೆ ಹೋಗಿ ಮೂರುವರೆ ಸುಮಾರಿಗೆ ಬರುತ್ತೇನೆ. ಕಾರು ನಿಲ್ಲಿಸಿ ರಾಘವಗೆ ಕರೆ ಮಾಡಿ ಕಾರ್ ಪಾರ್ಕ್ ಮಾಡಲು ಬೈಕ್ ಅಡ್ಡ ಇದೆ ಅದನ್ನು ಸರಿಪಡಿಸು ಎಂದು ಹೇಳಿದ್ದೆ. ಆದರೆ ಮಾತಾಡುವಾಗಲೇ ಫೋನ್ ಅರ್ಧದಲ್ಲಿಯೇ ಕಡಿತವಾಗಿದೆ. ಕಾರು ನಿಲ್ಲಿಸಿ ನಾನು ಒಳಹೋದಾಗ ಒಳಗಿದ್ದ ಅಪರಿಚಿತ ಹೊರಗೆ ಓಡಿ ಬಂದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಘವನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ. ಅಂಗಡಿಯಲ್ಲಿದ್ದ ಕೆಲವು ಆಭರಣಗಳು ಕಾಣೆಯಾಗಿವೆ. ಕಳೆದ ಏಳು ತಿಂಗಳಿನಿಂದ ರಾಘವ ಆಚಾರ್ಯ ನಮ್ಮಲ್ಲಿ ಕೆಲಸ ಮಾಡುತ್ತಿದ್ದರು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ ಜಾಹೀರಾತು ನೋಡಿ ಜಾಬ್‌ಗೆ ಅಪ್ಲೈ ಮಾಡ್ತೀರಾ? ಇಂಥ ವಂಚಕರಿದ್ದಾರೆ ಜೋಕೆ!