ಪುತ್ತೂರು (ದ.ಕ): ಕೊರೊನಾ ಭೀತಿಯ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ. ಹಲವು ಆತಂಕಗಳ ನಡುವೆಯೇ ಈ ಬಾರಿಯ ಪರೀಕ್ಷೆ ಜೂನ್ 25ರಂದು ಆರಂಭಗೊಂಡು ಇಂದಿಗೆ ಅಂತ್ಯಕಂಡಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಯೂ ತಾಲೂಕಿನ 12 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಈ ಬಾರಿಯ ಪರೀಕ್ಷೆ ಬರೆದಿದ್ದಾರೆ.
ಇನ್ನು ಪರೀಕ್ಷೆ ಬರೆದು ತಮ್ಮ ಅನುಭವ ಹಂಚಿಕೊಡಿರುವ ವಿದ್ಯಾರ್ಥಿನಿ ದಿಶಾ ಎಂ, ಕೊರೊನಾದ ಸಂಕಷ್ಟದ ವೇಳೆ ನಡೆದ ಪರೀಕ್ಷೆಯಲ್ಲಿ ಭಾಗಿಯಾದ ನಾವು ಪರೀಕ್ಷೆಯ ಜತೆಗೆ ಸಂಕಷ್ಟದ ಸಮಯದಲ್ಲಿ ಸಮಾಜದಲ್ಲಿ ಬದುಕುವ ಪಾಠ ಕಲಿತಿದ್ದೇವೆ. ಪರೀಕ್ಷೆ ಆರಂಭದ ಹಂತದಲ್ಲಿ ತೀರಾ ಭಯವಾಗಿತ್ತು. ಆದರೆ ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆ ಕಂಡ ನಂತರ ಭಯ ದೂರವಾಗಿತ್ತು ಎಂದಿದ್ದಾರೆ.
ಇನ್ನೋರ್ವ ವಿದ್ಯಾರ್ಥಿನಿ ಶ್ರೇಯಾ ಮಾತನಾಡಿ, ಯಾವ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಿದ್ದಾರೆ. ಕೊರೊನಾ ಹೆಮ್ಮಾರಿಯ ನಡುವೆಯೂ ಅತ್ಯುತ್ತಮ ವ್ಯವಸ್ಥೆ ಮೂಲಕ ನಮ್ಮನ್ನು ರಕ್ಷಿಸಿಕೊಳ್ಳುವ ಕೆಲಸ ನಡೆದಿತ್ತು. ವಿದ್ಯಾರ್ಥಿಗಳ ಪಾಲಿಗೆ ಇದೊಂದು ಹೊಸ ಅನುಭವವಾಗಿದೆ ಎಂದು ಪರೀಕ್ಷೆಯ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ.
ಪರೀಕ್ಷೆ ಅಂತ್ಯವಾಗಿರುವುದರಿಂದ ಪೋಷಕರಲ್ಲಿದ್ದ ಆತಂಕ ಸದ್ಯಕ್ಕೆ ದೂರಾಗಿದೆ. ಇದಲ್ಲದೆ ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಕಟ್ಟುನಿಟ್ಟಿನ ವ್ಯವಸ್ಥೆ, ಧ್ವನಿವರ್ಧಕ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ, ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪರೀಕ್ಷಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಿ ಕೈಗಳಿಗೆ ಸ್ಯಾನಿಟೈಸರ್ ನೀಡಿ ವಿದ್ಯಾರ್ಥಿಗಳನ್ನು ಒಳ ಕಳುಹಿಸುವ ಯಾವುದೇ ಸಮಸ್ಯೆ ಬಾರದಂತೆ ಮುಂಜಾಗೃತೆ ವಹಿಸಲಾಗಿತ್ತು.
ಪರೀಕ್ಷೆಗೆ ಗೈರು: ಆರಂಭದಿಂದ ಹಿಡಿದು ಕೊನೆಯ ಪರೀಕ್ಷೆಯವರೆಗೂ ವಿವಿಧ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಒಟ್ಟು 6 ವಿಷಯಗಳ ಪರೀಕ್ಷೆಯಲ್ಲಿ 5,007 ವಿದ್ಯಾರ್ಥಿಗಳು ಹಾಜರಾಗಬೇಕಾಗಿದ್ದರೂ ಅಂಕಿ ಅಂಶಗಳ ಪ್ರಕಾರ 252 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲೇ ಪರೀಕ್ಷೆ ಬರೆದಿದ್ದು, 37 ವಿದ್ಯಾರ್ಥಿಗಳು ಹೊರಜಿಲ್ಲೆಯ ವಿದ್ಯಾರ್ಥಿಗಳು ತಾಲೂಕಿನಲ್ಲಿ ಪರೀಕ್ಷೆಗೆ ಬರೆದಿದ್ದಾರೆ. ಎಲ್ಲಾ ದಿನಗಳ ಪರೀಕ್ಷೆಯಲ್ಲಿಯೂ 60ರಿಂದ 65 ಮಕ್ಕಳು ಗೈರು ಹಾಜರಾಗಿದ್ದಾರೆ.
ಪುತ್ತೂರು, ಕಡಬ ತಾಲೂಕಿನ 12 ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದಂತೆ ಜೂ. 25ರಂದು ದ್ವಿತೀಯ ಭಾಷೆ ಪರೀಕ್ಷೆಗೆ 4,853 ವಿದ್ಯಾರ್ಥಿಗಳ ಪೈಕಿ 62 ವಿದ್ಯಾರ್ಥಿಗಳು ಗೈರಾಗಿದ್ದರು. ಜೂ.27ರ ಗಣಿತ ಪರೀಕ್ಷೆ ವೇಳೆ ಒಟ್ಟು 4,912 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಗೈರಾಗಿದ್ದರು. ಜೂ.29ರ ವಿಜ್ಞಾನ ಪರೀಕ್ಷೆ ಬರೆಯಬೇಕಾಗಿದ್ದ 4,443 ವಿದ್ಯಾರ್ಥಿಗಳ ಪೈಕಿ 66 ವಿದ್ಯಾರ್ಥಿಗಳು ಗೈರಾಗಿದ್ದರು.
ಇದಲ್ಲದ ಜು.1ರಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ 4,907 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ಗೈರಾಗಿದ್ದರು. ಜು.2 ರಂದು 4,830 ವಿದ್ಯಾರ್ಥಿಗಳ ಪೈಕಿ 62 ವಿದ್ಯಾರ್ಥಿಗಳು ಗೈರಾಗಿದ್ದರು.
ಜು.3ರಂದು ನಡೆದ ತೃತೀಯ ಭಾಷೆ ಪರೀಕ್ಷೆಗೆ 4,825 ವಿದ್ಯಾರ್ಥಿಗಳ ಪೈಕಿ 62 ವಿದ್ಯಾರ್ಥಿಗಳು ಗೈರಾಗಿದ್ದರು. ಆದರೆ ಗಡಿ ಭಾಗದಿಂದ ಬರುವ ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ದಿನವೂ ಪರೀಕ್ಷೆಗೆ ಹಾಜರಾಗಿದ್ದರು. ಶಿಸ್ತುಬದ್ಧ ವ್ಯವಸ್ಥೆಗೆ ಪೂರಕವಾಗಿ ವಿದ್ಯಾರ್ಥಿಗಳು ಸ್ಪಂಧಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರ ಸಮರ್ಪಣಾ ಮನೋಭಾವದ ಸೇವೆ ಈ ಯಶಸ್ವಿಗೆ ಕಾರಣವಾಗಿದೆ. ಪರೀಕ್ಷೆಯ ನಂತರವೂ ಸಾಮಾಜಿಕವಾಗಿ ನಾವು ಹೇಗಿರಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಸಂದರ್ಭದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ಈ ಯಶಸ್ವಿಗೆ ಶಿಕ್ಷಣ ಇಲಾಖೆ ಮಾತ್ರವಲ್ಲ ಸಮಾಜವೇ ಪಾಲುದಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.