ಮಂಗಳೂರು: ಕೇರಳ ರಾಜ್ಯದ ಗಡಿಭಾಗದ ಸುಮಾರು 367 ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಪ್ರೌಢಶಾಲೆಗಳಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಈ ಹಿನ್ನೆಲೆ ಬರುವ ವಾರ ನಡೆಯಲಿರುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ದ.ಕ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.
ಕೊರೊನಾ ಸೋಂಕಿನ ಹಿನ್ನೆಲೆ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿ ಪ್ರಯಾಣಕ್ಕೆ ನಿರ್ಬಂಧವಿದೆ. ಹಾಗಾಗಿ ದ.ಕ. ಜಿಲ್ಲೆಯ ಖಾಸಗಿ ಶಾಲೆಯ ಬಸ್ಗಳ ಮೂಲಕ ಕೇರಳ-ಕರ್ನಾಟಕ ಗಡಿ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬಂದು ಪರೀಕ್ಷೆ ಮುಗಿದ ತಕ್ಷಣ ವಾಪಾಸ್ ಆಯಾ ಗಡಿ ಪ್ರದೇಶಕ್ಕೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಿದ್ದು, ವಾಟ್ಸಪ್ ಮೂಲಕ ಪ್ರವೇಶ ಪತ್ರ ಸಿಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ನೋಡಲ್ ಅಧಿಕಾರಿಗಳ ಮೂಲಕ ನಿರ್ದಿಷ್ಟ ಗಡಿ ಪ್ರದೇಶದಲ್ಲೇ ಪ್ರವೇಶ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.