ಮಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆ ಮಂಗಳೂರಿನಲ್ಲಿಯೂ ಭದ್ರತೆ ಕೈಗೊಳ್ಳಲು ಇಲ್ಲಿನ ಪೊಲೀಸರು ಸಲಹೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಮ್ಮ ಕಚೇರಿಯಲ್ಲಿ ಪ್ರಮುಖ ಉದ್ದಿಮೆ, ಮಾಲ್, ಧಾರ್ಮಿಕ ಸ್ಥಳಗಳ ನಿರ್ವಾಹಕರ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂಆರ್ಪಿಎಲ್, ಎನ್ಎಂಪಿಟಿ, ಇನ್ಫೋಸಿಸ್, ಮಾಲ್ ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳ ನಿರ್ವಾಹಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಶ್ರೀಲಂಕಾದ ಸ್ಫೋಟ ಪ್ರಕರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಿನ ವಿಮಾನ ನಿಲ್ದಾಣ, ಮಾಲ್, ಪ್ರಮುಖ ಉದ್ದಿಮೆ ಕೇಂದ್ರಗಳಲ್ಲಿ ಯಾರಾದರೂ ಸಂಶಯಾಸ್ಪದ ವ್ಯಕ್ತಿ ಕಂಡು ಬಂದರೆ ಅಂತವಯನ್ನು ತಪಾಸಣೆ ಮಾಡುವಂತೆ ಹಾಗೂ ಅನುಮಾನ ಬಂದ ವ್ಯಕ್ತಿಯ ಬಗ್ಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಲು ಅವರು ಸಲಹೆ ನೀಡಿದ್ದಾರೆ.