ಮಂಗಳೂರು: ಸೆ.2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಎಸ್ಪಿಜಿ ತಂಡ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ತಂಡದಲ್ಲಿ ಡಿಜಿಐ ರ್ಯಾಂಕ್ನ ಅಧಿಕಾರಿ ಸೇರಿದಂತೆ ಏಳು ಮಂದಿ ಅಧಿಕಾರಿಗಳ ತಂಡ ಸೋಮವಾರ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇಂದು ಮತ್ತಷ್ಟು ಭದ್ರತಾ ಪಡೆಯ ಸಿಬ್ಬಂದಿ ಬರಲಿದ್ದಾರೆ.
ಸೋಮವಾರ ಆಗಮಿಸಿರುವ ತಂಡ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರಧಾನಿಯವರ ಆಗಮನದ ವೇಳೆ ಭದ್ರತಾ ಶಿಷ್ಟಾಚಾರದ ಬಗ್ಗೆ ನಿರ್ದೇಶನ ನೀಡಿದೆ. ಅಲ್ಲದೆ ಎನ್ಎಂಪಿಎಗೂ ತೆರಳಿ ಪರಿಶೀಲನೆ ನಡೆಸಿರುವ ತಂಡ, ಎನ್ಎಂಪಿಎ ಅಧ್ಯಕ್ಷ ಹಾಗೂ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳೊಂದಿಗೂ ಸಭೆಗಳನ್ನು ನಡೆಸಿದೆ.
ಸಾರ್ವಜನಿಕ ಸಭೆ ನಡೆಯುವ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನಕ್ಕೂ ಭೇಟಿ ನೀಡಿರುವ ಎಸ್ಪಿಜಿ ತಂಡ, ಮಾಡಲಾಗುತ್ತಿರುವ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಿದೆ. ಅಲ್ಲದೆ ಎಸ್ಪಿಜಿ ತಂಡ ಇಡೀ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ.
(ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯಲ್ಲಿ ಮಾದರಿ ಕೆರೆ ನಿರ್ಮಾಣ.. ಮನ್ ಕಿ ಬಾತ್ನಲ್ಲಿ ಪ್ರಧಾನಿ ಶ್ಲಾಘನೆ)