ಮಂಗಳೂರು: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಶುಕ್ರವಾರ ನಡೆದ ಶಯನೋತ್ಸವಕ್ಕೆ 2 ಲಕ್ಷಕ್ಕೂ ಅಧಿಕ ಮಲ್ಲಿಗೆ ಹೂವಿನ ದಂಡೆ ಸಮರ್ಪಣೆಯಾಗಿದೆ.
ಜಾತ್ರೋತ್ಸವ ನಿಮಿತ್ತ ಭಕ್ತರು ದುರ್ಗೆಗೆ ಸಮರ್ಪಿಸುವ ಮಲ್ಲಿಗೆ ರಾಶಿಯಲ್ಲಿ ಶಯನೋತ್ಸವ ನಡೆಸುವುದು ಉತ್ಸವದ ಪ್ರಮುಖ ಆಕರ್ಷಣೆ. ಶಯನೋತ್ಸವದ ರಾತ್ರಿ ಗರ್ಭಗುಡಿಯನ್ನು ಪೂರ್ತಿ ಮಲ್ಲಿಗೆ ದಂಡೆಯಲ್ಲಿ ಅಲಂಕಾರಗೊಳಿಸಿ ದುರ್ಗೆಗೆ ಶಯನಕ್ಕೆ ವ್ಯವಸ್ಥೆ ಮಾಡಿ ಬಂಧನ ಮಾಡಲಾಗುತ್ತದೆ. ಘಮಘಮಿಸುವ ಈ ಮಲ್ಲಿಗೆಯ ತಲ್ಪದಲ್ಲಿ ದುರ್ಗೆಯು ಸುಖವಾಗಿ ನಿದ್ರೆಗೆ ಜಾರುತ್ತಾಳೆ ಎಂಬುದು ಪ್ರತೀತಿ.
ಮರುದಿನ ಬೆಳಗ್ಗೆ ವಿಶೇಷ ಪ್ರಾರ್ಥನೆಯೊಂದಿಗೆ ಗಂಟೆ ಬಾರಿಸಿ ಗರ್ಭಗುಡಿಯ ಬಾಗಿಲು ತೆಗೆಯುವ ಕ್ರಮ ಇರುತ್ತದೆ. ಮಲ್ಲಿಗೆ ಹೂವಿನ ಪರಿಮಳ ದೇಗುಲದ ಆವರಣದೆಲ್ಲೆಡೆ ಪಸರಿಸುತ್ತದೆ. ಅದೇ ಹೂಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಈ ರೀತಿಯಲ್ಲಿ ಶಯನೋತ್ಸವಕ್ಕೆ ಮಲ್ಲಿಗೆ ಸಮರ್ಪಿಸಿದವರ ಇಷ್ಟಾರ್ಥಗಳೂ ಈಡೇರುತ್ತವೆ ಎಂಬ ನಂಬಿಕೆ ಇದೆ.
ಈ ಹಿನ್ನೆಲೆ ಶ್ರೀದೇವಿಗೆ ನಿನ್ನೆ ರಾತ್ರಿ ಭಕ್ತರು ಭಕ್ತಿಯಿಂದ ಅರ್ಪಿಸಿರುವ ಮಲ್ಲಿಗೆ ರಾಶಿಯಲ್ಲಿ ಶಯನೋತ್ಸವ ನಡೆಯಿತು. ಕಳೆದ ವರ್ಷ ಕೊರೊನಾ ಕಾರಣದಿಂದ ಜಾತ್ರೆ ನಡೆದಿರಲಿಲ್ಲ. ಹಾಗಾಗಿ ಈ ಬಾರಿ ದುಪ್ಪಟ್ಟು ಮಲ್ಲಿಗೆಯ ಹರಕೆ ಸಲ್ಲುವ ನಿರೀಕ್ಷೆ ಇತ್ತು. ಅದರಂತೆ ಈ ಬಾರಿ 2 ಲಕ್ಷಕ್ಕೂ ಅಧಿಕ ಚೆಂಡು ಮಲ್ಲಿಗೆ ಭಕ್ತರಿಂದ ಕಾಣಿಕೆಯಾಗಿ ಸಮರ್ಪಣೆಯಾಗಿವೆ.
ಇದನ್ನೂ ಓದಿ: ರಾಜ್ಯದಲ್ಲಿ 10 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಇಂದು 4,373 ಜನರಿಗೆ ಕೊರೊನಾ
2019 ರಲ್ಲಿ ಒಂದೂವರೆ ಲಕ್ಷ ದಂಡೆ ಮಲ್ಲಿಗೆ ಸಮರ್ಪಣೆಯಾಗಿತ್ತು. ಬಪ್ಪನಾಡು ಶ್ರೀದುರ್ಗೆಯ ಶಯನೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಮಲ್ಲಿಗೆ ದಂಡೆ ಸಮರ್ಪಿಸುತ್ತಾರೆ.