ಬೆಳ್ತಂಗಡಿ : ಸರ್ಕಾರಿ ನೌಕರರು ಸಮಾಜದ ಕಟ್ಟಕಡೆಯ ಕುಟುಂಬಗಳ ಹಿತದೃಷ್ಟಿಯಿಂದ ಸೇವೆ ಸಲ್ಲಿಸುವವರು. ಹಲವಾರು ಸರ್ಕಾರಿ ನೌಕರರು ಮಾನವೀಯ ಸೇವೆಯನ್ನು ನೀಡುತ್ತಿರುವುದನ್ನು ಗೌರವಿಸಿದರೆ ಇನ್ನಷ್ಟು ಸೇವೆ ಮಾಡಲು ಶಕ್ತಿ ತುಂಬುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಹೇಳಿದರು.
ಬೆಳಕು ಬೆಳ್ತಂಗಡಿ ವತಿಯಿಂದ ಸೇವಾ ಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಿ ಅವರು ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಮನೋಹರ್ ಬಳಂಜ ಮಾತನಾಡಿ, ಸತ್ಯ ಮತ್ತು ಪ್ರಾಮಾಣಿಕ ಮನಸ್ಸುಗಳಿದ್ದರೆ ಸಮಾಜ ಯಾವತ್ತೂ ಕೈಬಿಡುವುದಿಲ್ಲ. ಗುರು ಹಿರಿಯರಿಗೆ ಗೌರವ ಕೊಡಬೇಕು ಮತ್ತು ಪ್ರಾಮಾಣಿಕತೆ ಇದ್ದರೆ ದೇವರ ಅನುಗ್ರಹ ಯಾವತ್ತೂ ಸಿಗುತ್ತದೆ ಎಂದರು.
ಬೆಳಕು ಬೆಳ್ತಂಗಡಿ ಮಹಾಪೋಷಕರಾದ ಧರಣೇಂದ್ರ ಮಾತನಾಡಿ, ಸೇವೆ ಮತ್ತು ತ್ಯಾಗದ ಮನೋಭಾವದಿಂದ ಬೆಳಕು ಬೆಳ್ತಂಗಡಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಇದರಲ್ಲಿ ಪ್ರಾಮಾಣಿಕತೆ ಮತ್ತು ಹೃದಯ ವಂತಿಕೆಯುಳ್ಳವರು ಮಾತ್ರ ಇರುವರು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಶೈವಿ ಅವರಿಗೆ ಪಿಯುಸಿ ನಂತರದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ಭವಿಷ್ಯ ನಿಧಿಯನ್ನು ಬೆಳಕು ಬೆಳ್ತಂಗಡಿ ವತಿಯಿಂದ ನೀಡಲಾಯಿತು.
ಅದೇ ರೀತಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಯನ್ನು ಗೌರವಿಸಲಾಯಿತು ಮತ್ತು ಬಡ ಕುಟುಂಬದ ಹಲವಾರು ವಿದ್ಯಾರ್ಥಿಗಳಿಗೆ ನೆರವನ್ನು ನಿಡಲಾಯಿತು.