ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಶೀಘ್ರ ಕೊರೊನಾ ಸೋಂಕು ಮುಕ್ತರಾಗಲಿ ಎಂದು ಪ್ರಾರ್ಥಿಸಿ ಕುದ್ರೋಳಿ ಗೋಕರ್ಣನಾಥ ದೇವರಿಗೆ 109 ಸೀಯಾಳಾಭಿಷೇಕ ನೆರವೇರಿಸಲಾಯಿತು.
ಪೂಜಾರಿ ಹಾಗೂ ಅವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ದೃಢಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ದೇವಳ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಾರ್ದನ ಪೂಜಾರಿಯವರ ಅಭಿಮಾನಿಗಳ ವತಿಯಿಂದ ಸೀಯಾಳಾಭಿಷೇಕ ಹಾಗೂ ಮಹಾಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಟಿ. ಕೆ. ಸುಧೀರ್, ಮಾಜಿ ಮೇಯರ್ ಅಶ್ರಫ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ. ಸಿ. ಭಂಡಾರಿ, ಕುದ್ರೋಳಿ ದೇವಳದ ಕೋಶಾಧಿಕಾರಿ ಪದ್ಮರಾಜ್.ಆರ್, ಮಾಜಿ ಮ.ನ.ಪಾ ಸದಸ್ಯ ಪುರುಷೋತ್ತಮ ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.