ಮಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಬೇಕು ಎಂದು ಪ್ರಾರ್ಥಿಸಿ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ವಿಶೇಷ ಪೂಜೆ ಸಲ್ಲಿಸಿದರು.
ಎರಡು ದಿನಗಳ ಕರಾವಳಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ಕದ್ರಿ ದೇವಸ್ಥಾನಕ್ಕೆ ಬಂದ ಬಿಜೆಪಿ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಅಶ್ವತ್ಥ ನಾರಾಯಣ ಕದ್ರಿ ಮಂಜುನಾಥ ಸನ್ನಿಧಿಯಲ್ಲಿ ದೀಪಾರಾಧನೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಪಕ್ಷ ಜಯಭೇರಿ ಸಾಧಿಸುವಂತೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಕೊರೊನಾ ವೈರಸ್ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಹೆಜ್ಜೆಯಿಂದ ನಿಯಂತ್ರಣ ಸಾಧ್ಯವಾಗಿದೆ ಮತ್ತು ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ತೆಗೆದುಕೊಂಡ ಕ್ರಮದ ಬಗ್ಗೆ ಶ್ಲಾಘಿಸಿದರು.
ಬಿಜೆಪಿ ಮುಖಂಡರಿಗೆ ದೇವಸ್ಥಾನದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿಶೇಷ ಪೂಜೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮಂಗಳೂರು ಮೇಯರ್ ದಿವಾಕರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮೊದಲಾದವರು ಭಾಗಿಯಾಗಿದ್ದರು.